ಅಮೆರಿಕ ಒಂದು ಕಾಲದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿತ್ತು. ಆದ್ರೆ ಸದ್ಯಕ್ಕೆ ಈ ಮಾತು ಬದಲಾಗಿದೆ, ಅಮೆರಿಕ ಈಗ ಚಿನ್ನ ಮುಟ್ಟಿದ್ರೂ ಮಣ್ಣಾಗುತ್ತಿದೆ! ಹೌದು, ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಅಮೆರಿಕ ತನ್ನ ಪ್ರಜೆಗಳಿಗೆ ಕೈಗೆಟಕುವ ದರದಲ್ಲಿ ಬಟ್ಟೆ ಸಪ್ಲೈ ಮಾಡೋಕು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಜೀನ್ಸ್ ಮತ್ತಿತರ ಕಾಟನ್ ಬಟ್ಟೆಗಳ ಬೆಲೆ ಡಬಲ್ ಆಗುವ ಆತಂಕ ಎದುರಾಗಿದೆ. ಅಷ್ಟಕ್ಕೂ ದಿಢೀರ್ ರೇಟ್ ಹೆಚ್ಚಲು ಕಾರಣ ಹವಾಮಾನ ಬದಲಾವಣೆ ಅಂತೆ. ಇದು ಆಶ್ಚರ್ಯ ಎನಿಸಿದ್ರೂ ಸತ್ಯ.
ಏಕೆಂದರೆ ಹವಾಮಾನ ಬದಲಾವಣೆ ಪರಿಣಾಮ ಹತ್ತಿ ಬೆಳೆ ನಾಶವಾಗುತ್ತಿದೆ. ಇಳುವರಿಯಲ್ಲಿ ಸಿಕ್ಕಾಪಟ್ಟೆ ಕೊರತೆ ಉಂಟಾಗಿದ್ದು, ಹತ್ತಿ ಬೆಲೆ ದುಪ್ಪಟ್ಟಾಗುವಂತೆ ಮಾಡಿದೆ. ಹೀಗಾಗಿ 'ಜೀನ್ಸ್' ಬೆಲೆ ಗಗನಕ್ಕೇರಿದೆ ಎನ್ನುತ್ತಿದ್ದಾರೆ ತಜ್ಞರು. ಈ ನಡುವೆ ಹತ್ತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೃಷ್ಟಿಯಾಗಿರುವ ಬೇಡಿಕೆಯಿಂದ ಕಾಟನ್ ಬಟ್ಟೆಗಳ ತಯಾರಿಕೆಗೆ ಭಾರಿ ಅಡ್ಡಿಯಾಗುತ್ತಿದೆ.
ಜೀನ್ಸ್ ಪ್ರಿಯ ಅಮೆರಿಕನ್ನರು ತಮ್ಮಿಷ್ಟದ ಕಾಟನ್ ಬಟ್ಟೆ ಕೊಂಡುಕೊಳ್ಳಲು ಹಿಂದೆ ಮುಂದೆ ಯೋಚಿಸುವಂತಾಗಿದೆ. ಹತ್ತು ವರ್ಷಗಳಲ್ಲೇ ಕಾಟನ್ ಉತ್ಪನ್ನಗಳಲ್ಲಿ ಇದು ಬಹುದೊಡ್ಡ ಬೆಲೆ ಏರಿಕೆ ಅಂತಾ ಹೇಳಲಾಗಿದೆ. ದಶಕದಲ್ಲೇ ಕಾಣದ ದುಬಾರಿ ಬೆಲೆಯನ್ನ ಕಾಟನ್ ಉತ್ಪನ್ನಗಳು ಈಗ ಕಾಣುವಂತಾಗಿದೆ.
ಎಲ್ಲಾ ಅಲ್ಲೋಲ ಕಲ್ಲೋಲ..!ಹವಾಮಾನ ಬದಲಾವಣೆ ಎಲ್ಲಾ ಹಾಳುವ ಮಾಡಿದೆ. ಅದರಲ್ಲೂ ಅಮೆರಿಕ ಪದೇ ಪದೆ ಜಾಗತಿಕ ತಾಪಮಾನ ಏರಿಕೆಯ ಪರಿಣಾಮವನ್ನ ಎದುರಿಸುತ್ತಿದೆ. ದಿಢೀರ್ ಸೃಷ್ಟಿಯಾಗುವ ಚಂಡಮಾರುತಗಳು ಅಮೆರಿಕದ ಹಲವು ರಾಜ್ಯಗಳನ್ನ ನುಂಗಿ ಹಾಕುತ್ತಿವೆ. ಭಾರಿ ಪ್ರಮಾಣದಲ್ಲಿ ಬೀಳುತ್ತಿರುವ ಮಳೆ, ಹಾಗೇ ಇನ್ನಷ್ಟು ರಾಜ್ಯಗಳಲ್ಲಿ ಮಳೆ ಕೊರತೆ. ಹೀಗೆ ಅಮೆರಿಕದಲ್ಲಿ ಎಲ್ಲಾ ಅಲ್ಲೋಲ ಕಲ್ಲೋಲ ಆಗೋಗಿದೆ. ಈ ಕಾರಣಕ್ಕೆ ಹತ್ತಿ ಬೆಳೆ ಕೈಕೊಟ್ಟಿದ್ದು, ಬೇಡಿಕೆಗೆ ಅನುಗುಣವಾಗಿ ಹತ್ತಿ ಸರಬರಾಜು ಮಾಡಲು ಆಗುತ್ತಿಲ್ಲ. ಇದು ಕಾಟನ್ ಬಟ್ಟೆಗಳನ್ನ ತಯಾರಿಸುವ ಕಂಪನಿಗಳಿಗೆ ದೊಡ್ಡ ಹೊಡೆತ ನೀಡಿದೆ.
ಭಾರತದಲ್ಲೂ ಇದೇ ಸಮಸ್ಯೆ
ಅಂದಹಾಗೆ ಜಾಗತಿಕ ಮಟ್ಟದಲ್ಲಿ ಹತ್ತಿ ಪೂರೈಸುವ ರಾಷ್ಟ್ರಗಳ ಪೈಕಿ ಭಾರತವೂ ಮುಂಚೂಣಿಯಲ್ಲಿದೆ. ಆದರೆ ಭಾರತದಲ್ಲೂ ಹವಾಮಾನ ಬದಲಾವಣೆ ಪರಿಣಾಮ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಭಾರತದಲ್ಲಿ ಹತ್ತಿಯ ಬೆಳೆಗೆ ಹಲವು ಕಂಟಕಗಳು ಎದುರಾಗಿದ್ದು, ಕೀಟಗಳ ಕಾಟ ಸೇರಿದಂತೆ ಮಳೆಯ ಕೊರತೆ, ಅತಿಯಾದ ಮಳೆ ಹತ್ತಿ ಬೆಳೆಗೆ ಕಂಟಕ ತಂತಿದೆ. ಹೀಗಾಗಿ ಭಾರತದಿಂದ ಕೂಡ ನಿರೀಕ್ಷಿತ ಮಟ್ಟದಲ್ಲಿ ಜಗತ್ತಿಗೆ ಹತ್ತಿಯನ್ನ ಪೂರೈಕೆ ಮಾಡಲು ಆಗುತ್ತಿಲ್ಲ. ದಿನದಿಂದ ದಿನಕ್ಕೆ ಕಚ್ಚಾ ಹತ್ತಿಯ ಬೆಲೆ ಭಾರಿ ಏರಿಕೆ ಕಾಣುತ್ತಿದೆ.
ಆಫ್ರಿಕಾ ದೇಶಗಳಲ್ಲೂ ನಡುಕ
ಇನ್ನು ಹತ್ತಿ ಪೂರೈಕೆ ಮಾಡುವ ಪ್ರಮುಖ ದೇಶಗಳ ಪೈಕಿ ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಭಾರತ ಮತ್ತು ಆಫ್ರಿಕಾ ರಾಷ್ಟ್ರಗಳು ಮುಂಚೂಣಿಯಲ್ಲಿವೆ. ಆಫ್ರಿಕಾ ಖಂಡದಲ್ಲೂ ಪ್ರಾಕೃತಿಕ ವಿಕೋಪಗಳು ಹಲವು ಸಮಸ್ಯೆಗೆ ಕಾರಣವಾಗಿವೆ. ಹತ್ತಿ ಬೆಳೆಗಾರರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮತ್ತೊಂದು ಕಡೆ ಹತ್ತಿ ಬೆಳೆ ಪೂರೈಕೆ ಮಾಡಲು ಎದುರಾಗುತ್ತಿರುವ ಸಮಸ್ಯೆ ಕೂಡ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಕಾಟನ್ ಬಟ್ಟೆ ತಯಾರಿಕೆ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂಬ ಆತಂಕ ತಜ್ಞರದ್ದು.
ಅಮೆರಿಕದಲ್ಲಿ ನೀರಿಗೂ ಬರ
ಕೊರೊನಾ, ಅಫ್ಘಾನಿಸ್ತಾನ, ಚುನಾವಣೆ, ಕಾಡ್ಗಿಚ್ಚು, ಬಿಸಿಗಾಳಿ ಹೀಗೆ ತನ್ನದೇ ಸಮಸ್ಯೆಗಳನ್ನ ಎದುರಿಸುತ್ತಿರುವ ಅಮೆರಿಕದಲ್ಲಿ ಹೊಸ ತಲೆನೋವು ಶುರುವಾಗಿದೆ. ಅಮೆರಿಕದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಹನಿಹನಿ ನೀರಿಗೂ ಜನ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಯಾಲಿಫೋರ್ನಿಯಾ ಸೇರಿದಂತೆ ಪಶ್ಚಿಮ ಭಾಗದ ರಾಜ್ಯಗಳಿಗೆ ಜೀವಜಲದ ಮೂಲವಾಗಿದ್ದ ಕೊಲೊರಾಡೋ ನದಿ ಬತ್ತಿ ಹೋಗಿದೆ. ಹಲವು ವರ್ಷಗಳಿಂದಲೂ ಎದುರಾಗುತ್ತಿರುವ ಕಾಡ್ಗಿಚ್ಚು, ಮಳೆ ಕೊರತೆ.
ನೆವಾಡಾ ಮತ್ತು ಅರಿಜೋನ ಗಡಿಯಲ್ಲಿ ನಿರ್ಮಿಸಿರುವ ಹೂವರ್ ಡ್ಯಾಂನಲ್ಲಿ ನೀರು ಡೆಡ್ ಸ್ಟೋರೇಜ್ ತಲುಪಿದ್ದು ಸುಮಾರು 40 ಲಕ್ಷ ಅಮೆರಿಕನ್ನರು ಹನಿಹನಿ ನೀರಿಗೂ ಪರದಾಡಬೇಕಿದೆ. ಅಧಿಕಾರಿಗಳು ಈ ಬಗ್ಗೆ ಅಧಿಕೃತ ಘೋಷಣೆ ಹೊರಡಸಿದ್ದು, ಕೊರೊನಾ 4ನೇ ಅಲೆಯ ಭೀತಿ ನಡುವೆ ಜೀವಜಲಕ್ಕೂ ಜನ ಬಡಿದಾಡಬೇಕಿದೆ.