ಕಾಸರಗೋಡು: ಕೇರಳ ತುಳು ಅಕಾಡೆಮಿಯ ತುಳುಭವನ ಸಭಾಂಗಣಕ್ಕೆ ಮಾಜಿ ಸಂಸದ, ಸಾಮಾಜಿಕ, ರಾಜಕೀಯ ರಂಗಗಳ ಧೀಮಂತ ನಾಯಕ ಎಂ.ರಾಮಣ್ಣ ರೈ ಅವರ ಹೆಸರಿಡಲು ತೀರ್ಮಾನಿಸಲಾಗಿದೆ.
ಕೇರಳ ತುಳು ಅಕಾಡೆಮಿಯ ಮಹಾಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಎಂ.ರಾಮಣ್ಣ ರೈ ಅವರು ತುಳುನಾಡು-ನುಡಿಗಳ ಅಭ್ಯುದಯಕ್ಕಾಗಿ ಹೋರಾಟ ನಡೆಸಿದವರು. ಪ್ರತ್ಯೇಕ ತುಳುರಾಜ್ಯ ಬೇಕೆಂದು ಸರಕಾರಗಳನ್ನು ಒತ್ತಾಯಿಸಿದವರು. ತುಳು ಅಕಾಡೆಮಿಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಅವರ ಕೆಲಸ ಕಾರ್ಯಗಳನ್ನು ಸದಾ ನೆನಪಿಸುವ ನಿಟ್ಟಿನಲ್ಲಿ ಅಕಾಡೆಮಿಯ ತುಳುಭವನ ಸಭಾಂಗಣಕ್ಕೆ "ರಾಮಣ್ಣ ರೈ ಚಾವಡಿ" ಎಂದು ಹೆಸರಿಡಲು ಮಹಾಸಭೆ ನಿರ್ಧರಿಸಿದೆ ಎಂದು ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ತಿಳಿಸಿದರು.
ಹಿರಿಯ ಸದಸ್ಯ ಎಸ್.ನಾರಾಯಣ ಭಟ್, ಸದಸ್ಯರಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ರಾಮಕೃಷ್ಣ ಕಡಂಬಾರ್, ರವೀಂದ್ರ ರೈ ಮಲ್ಲಾವರ, ಭಾರತೀ ಬಾಬು, ರಾಜೀವಿ, ಸಚಿತಾ ರೈ ಉಪಸ್ಥಿತರಿದ್ದರು.
ತುಳು ಭವನಕ್ಕೆ ಆವರಣಗೋಡೆ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಶೀಘ್ರದಲ್ಲೇ ಶಿಲಾನ್ಯಾಸ ಜರುಗಲಿದೆ. ಇದೇ ವೇಳೆ ಜಿಲ್ಲೆಯ ಶಾಸಕರುಗಳಿಗೆ ಗೌರವಾರ್ಪಣೆಯೂ ನಡೆಯಲಿದೆ.
ಸದಸ್ಯ ಬಾಲಕೃಷ್ಣ ಶೆಟ್ಟಿಗಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯ ವಿಶ್ವನಾಥ ಕುದುರು ವಂದಿಸಿದರು.