HEALTH TIPS

ಶ್ರೀಕೃಷ್ಣನ ಚಿತ್ರಕಲೆ: ಮುಸ್ಲಿಂ ಮಹಿಳೆಯಿಂದ ದೇವಾಸ್ಥಾನಕ್ಕೆ ಚಿತ್ರಗಳ ಹಸ್ತಾಂತರ

                  ಕೋಯಿಕ್ಕೋಡ್ : ಅವರೊಬ್ಬರು ಚಿತ್ರ ಕಲಾವಿದೆ. ಆರು ವರ್ಷಗಳಲ್ಲಿ ಅವರು ಶ್ರೀಕೃಷ್ಣನ ವಿವಿಧ ಭಂಗಿಯ ನೂರಾರು ಚಿತ್ರಗಳನ್ನು ರಚಿಸಿದ್ದಾರೆ. ಆದರೆ ಆಕೆಯ ಧರ್ಮ ಹಾಗೂ ಆಚರಣೆಗಳು ಇವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಅವಕಾಶ ನೀಡುವುದಿಲ್ಲ. ಕಾರಣ, ಅವರು ಮುಸಲ್ಮಾನರು.

             ಹೀಗಾಗಿ, ತಾವು ರಚಿಸಿರುವ ಶ್ರೀಕೃಷ್ಣನ ವಿವಿಧ ಚಿತ್ರಗಳನ್ನು ಇತ್ತೀಚಿನ ವರ್ಷಗಳಲ್ಲಿ ತ್ರಿಸೂರಿನ ಹೆಸರಾಂತ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ತಪ್ಪದೇ ಹಸ್ತಾಂತರಿಸಿದ್ದಾರೆ. ಆದರೆ, ಪುರಾತನವಾದ ಈ ದೇಗುಲದ ಒಳಗೇ ಅವರು ಹೋಗುವಂತಿಲ್ಲ. ಏಕೆಂದರೆ, ಅದು ಹಿಂದೂ ದೇವಾಲಯ. ಹಿಂದೂಯೇತರರಿಗೆ ಪ್ರವೇಶ ನಿಷಿದ್ಧ.

             ಈ ನಿರ್ಬಂಧಗಳ ಪರಿಣಾಮವಾಗಿ ಅವರು ಚಿತ್ರಿಸಿದ ಕಲಾಕೃತಿಗಳನ್ನು ಹೊರಗೆ ಹುಂಡಿಯ ಬಳಿ ಇಡುತ್ತಾರೆ ಅಥವಾ ವಿಷು ಅಥವಾ ಜನ್ಮಾಷ್ಟಮಿ ಅವಧಿಯ‌ಲ್ಲಿ ಪ್ರತಿವರ್ಷವೂ ದೇಗುಲದ ಸಿಬ್ಬಂದಿಗೆ ಹಸ್ತಾಂತರಿಸುತ್ತಾರೆ.

            ಆದರೆ, ಈ ಬೆಳವಣಿಗೆಗಳು ಮತ್ತು ನಿರ್ಬಂಧ ಉತ್ತರ ಕೇರಳದ ಕೊಯಿಲಾಂಡಿಯ ಮುಸ್ಲಿಂ ಸಂಪ್ರದಾಯಸ್ಥ ಕುಟುಂಬದ ಆ ಮಹಿಳೆಯ ಶ್ರೀಕೃಷ್ಣನ ಚಿತ್ರಗಳನ್ನು ರಚಿಸುವ ಆಸಕ್ತಿ, ಉತ್ಸಾಹಕ್ಕೆ ಭಂಗ ಉಂಟು ಮಾಡಿಲ್ಲ.

               ಅವರು 28 ವರ್ಷದ ಗೃಹಿಣಿ ಜಸ್ನಾ ಸಲೀಂ. ಎರಡು ಮಕ್ಕಳ ತಾಯಿ. ಸಮುದಾಯದ ಜನರು, ಸಂಬಂಧಿಕರ ಆಕ್ಷೇಪದ ನಡುವೆಯೂ ಅವರು ಶ್ರೀಕೃಷ್ಣನ ಚಿತ್ರ ರಚನೆಯಲ್ಲಿ ತೊಡಗಿದ್ದು, 500ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಇದೀಗ ಅವರ ಪಾಲಿಗೆ ಸಂತಸವೊಂದು ದಕ್ಕಿದೆ. ಖುದ್ದು ದೇಗುಲಕ್ಕೆ ತೆರಳಿ ಚಿತ್ರಕಲೆಯನ್ನು ಹಸ್ತಾಂತರಿಸಿದ್ದಾರೆ.

            ಪಟ್ಟಣಂತಿಟ್ಟ ಜಿಲ್ಲೆಯ ಪಾಂಡಲಂ ಬಳಿ ಇರುವ ಉಳನಾಡು ಶ್ರೀಕೃಷ್ಣ ಸ್ವಾಮಿ ದೇವಸ್ಥಾನದ ಸಿಬ್ಬಂದಿ, ಮಹಿಳೆಯನ್ನು ದೇವಸ್ಥಾನಕ್ಕೆ ಆಹ್ವಾನಿಸಿ, 'ಬೆಣ್ಣೆಯ ಕುಡಿಕೆ ಜೊತೆಗೆ ಬಾಲ ಕೃಷ್ಣ' ನಿಂತ ಭಂಗಿಯಲ್ಲಿದ್ದ ಚಿತ್ರವನ್ನು ಸ್ವೀಕರಿಸಿದ್ದಾರೆ. ಅರ್ಚಕರು ಈ ಚಿತ್ರಕಲೆಗೆ ತುಳಸಿಹಾರ ಹಾಕಿ ಅಲಂಕರಿಸಿದ್ದರು.

                'ಇದು, ಕನಸು ನನಸಾದ ಸಂದರ್ಭ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವ ದೇವರ ಮೂರ್ತಿಯನ್ನು ಜೀವನದಲ್ಲೇ ಮೊದಲಿಗೆ ವೀಕ್ಷಿಸುತ್ತಿದ್ದೇನೆ' ಎಂದು ಸಲೀಂ ಸಂತಸ ಹಂಚಿಕೊಂಡರು.

         'ಮನಸ್ಸಿಗೆ ಖುಷಿಯಾಯಿತು. ದೇವಸ್ಥಾನದ ಸಿಬ್ಬಂದಿ ನನಗೆ ಧಾರ್ಮಿಕ ಆಚರಣೆಗಳನ್ನು ವಿವರಿಸಿದರು. ನಾನು ಚಿತ್ರಕಲೆಯನ್ನು ತೆರೆದು, ಗರ್ಭಗುಡಿಯ ಮೂರ್ತಿಗೆ ಅಭಿಮುಖವಾಗಿ ಹಿಡಿದೆ' ಎಂದು ಖುಷಿ ಹಂಚಿಕೊಂಡರು.

           ಜನ್ಮಾಷ್ಠಮಿಯಂದು ನಾನು ಗುರುವಾಯೂರು ದೇವಸ್ಥಾನಕ್ಕೆ ಚಿತ್ರವನ್ನು ಹಸ್ತಾಂತರಿಸಿದ ಚಿತ್ರ ಪ್ರಕಟವಾಗಿತ್ತು. ಅದನ್ನು ಗಮನಿಸಿದ್ದ ಈ ದೇಗುಲದ ಸಿಬ್ಬಂದಿ ತಮ್ಮನ್ನು ಸಂಪರ್ಕಿಸಿ ಚಿತ್ರ ಪಡೆದರು ಎಂದು ತಿಳಿಸಿದರು. ಶ್ರೀಕೃಷ್ಣನ ಚಿತ್ರವನ್ನು ನಾನು ಹೆಚ್ಚು ನಿಖರತೆ, ಸ್ಪಷ್ಟತೆಯೊಂದಿಗೆ ಚಿತ್ರಿಸಬಲ್ಲೆ ಎಂದೂ ಹೇಳಿಕೊಂಡರು.

         'ನಾನು ನನ್ನ ಧರ್ಮದ ನಂಬಿಕೆ, ಆಚರಣೆಗೆ ವಿರುದ್ಧವಾಗಿಲ್ಲ ಎಂಬುದು ನನ್ನ ಪೋಷಕರು, ಕುಟುಂಬದವರಿಗೂ ಮನವರಿಕೆಯಾಗಿದೆ. ಅವರೂ ಚಿತ್ರಕಲೆ ರಚನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ' ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries