ಸಾಂಪ್ರದಾಯಿಕ ಅಡುಗೆಯಿಂದ ಹಿಡಿದು, ಚೈನೀಸ್‌ನಂತ ಅಡುಗೆ ಶೈಲಿಯವರೆಗೂ ಬಳಸುವ ಒಂದು ಪದಾರ್ಥ ಅಂದ್ರೆ ಅದು ಹಿಂಗು ಅಥವಾ ಇಂಗು. ಈ ಒಂದು ಮಸಾಲೆಯನ್ನ ಬಳಸಿ ಯಾವುದಾದರೂ ಸಾಂಬಾರ್‌ಗೆ ಒಗ್ಗರಣೆ ಸೇರಿಸಿದರೆ ಸಾಕು, ಅದರ ಘಮವೇ ಬದಲಾಗಿ ಹೋಗುವುದು. ಆದ್ರೆ ಇದೇ ಪದಾರ್ಥ ನಿಮ್ಮ ಆರೋಗ್ಯಕ್ಕೆ ಮ್ಯಾಜಿಕ್ ಮಾಡಬಹುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ?.
ಹೌದು, ರುಚಿ ಹೆಚ್ಚಿಸುವ ಹಿಂಗ್ ಅಥವಾ ಇಂಗು ಜೀರ್ಣಕ್ರಿಯೆ ಮತ್ತು ತೂಕ ನಷ್ಟಕ್ಕೆ ಉತ್ತಮವಾಗಿದ್ದು, ಇದು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಮತ್ತು ವೈರಾಣು ವಿರೋಧಿ ಗುಣಗಳನ್ನು ಹೊಂದಿರುವುದರಿಂದ ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಬಹಳ ಒಳ್ಳೆಯದು. ಹಾಗಾದ್ರೆ ಅದನ್ನು ಬಳಸುವುದು ಹೇಗೆ? ಇದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ನೋಡೋಣ.
ಒಗ್ಗರಣೆಗೆ ಇಂಗು ಸೇರಿಸುವುದನ್ನು ಹೊರತುಪಡಿಸಿ, ಅದನ್ನು ಸೇವಿಸುವ ಉತ್ತಮ ವಿಧಾನವೆಂದರೆ ಇಂಗು ನೀರು. ಇದರಿಂದ ಸಿಗುವ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ: ಇಂಗು ನೀರು ತಯಾರಿಸುವುದು ಹೇಗೆ?: ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಂಡು, ಅದಕ್ಕೆ 1/2 ಚಮಚ ಹಿಂಗ್ ಪೌಡರ್ ಸೇರಿಸಿ. ಉತ್ತಮ ಪ್ರಯೋಜನಗಳಿಗಾಗಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇಂಗು ನೀರು ಕುಡಿಯುವುದರಿಂದ ಸಿಗುವ ಕೆಲವು ಪ್ರಯೋಜನಗಳು ಇಲ್ಲಿವೆ:
1. ಜೀರ್ಣಕ್ರಿಯೆಯನ್ನು ಸುಧಾರಿಸುವುದು: ಜೀರ್ಣಕಾರಿ ಸಮಸ್ಯೆಗಳನ್ನು ನಿಭಾಯಿಸಲು ಇಂಗು ನಿಮಗೆ ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗುವ ಎಲ್ಲಾ ಹಾನಿಕಾರಕ ಜೀವಾಣುಗಳನ್ನು ಜೀರ್ಣಾಂಗವ್ಯೂಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸಿ, ಹೊಟ್ಟೆಯ ಪಿಹೆಚ್ ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ತರುತ್ತದೆ.2. ತೂಕ ನಷ್ಟಕ್ಕೆ ಸಹಾಯ ಮಾಡುವುದು: ಇಂಗು ನೀರು ನಿಮ್ಮ ಚಯಾಪಚಯ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಚಯಾಪಚಯ ದರ ಎಂದರೆ ಉತ್ತಮ ತೂಕ ನಷ್ಟ. ಆದ್ದರಿಂದ ಈ ನೀರು ಕುಡಿಯುವುದರಿಂದ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಬಹುದು. ಇದು ನಿಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ನಿಮ್ಮ ಹೃದಯದ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲ.
3. ಶೀತವನ್ನು ತಡೆಯುವುದು: ನಿಮಗೆ ಚಳಿಗಾಲದಲ್ಲಿ ಬೇಗನೆ ನೆಗಡಿ ಬರುತ್ತಿದ್ದರೆ, ಇಂಗು ನೀರು ಕುಡಿಯಿರಿ. ಇದು ಉಸಿರಾಟದ ಸಮಸ್ಯೆಗಳನ್ನು ದೂರವಿರಿಸುತ್ತದೆ ಜೊತೆಗೆ ಶೀತವನ್ನು ತಡೆಯುತ್ತದೆ.
4. ತಲೆನೋವನ್ನು ಕಡಿಮೆ ಮಾಡುವುದು: ಹಿಂಗ್ ನ ಉರಿಯೂತ ನಿವಾರಕ ಗುಣಗಳು ತಲೆನೋವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ತಲೆಯ ರಕ್ತನಾಳಗಳಲ್ಲಿ ಉರಿಯೂತವನ್ನು ಕಡಿಮೆ ಮಾಡಿ, ತಲೆನೋವಿನಿಂದ ಪರಿಹಾರ ಪಡೆಯಲು ಸಹಾಯ ಮಾಡುವುದು.
5. ಮುಟ್ಟಿನ ನೋವಿನಿಂದ ಪರಿಹಾರ: ಮುಟ್ಟಿನ ನೋವನ್ನು ಎದುರಿಸಲು ಕೆಲವೊಮ್ಮೆ ಕಷ್ಟವಾಗುತ್ತದೆ. ಬೆನ್ನು ಮತ್ತು ಕೆಳ ಹೊಟ್ಟೆಯ ನೋವನ್ನು ಹೋಗಲಾಡಿಸಲು ಇಂಗು ಉತ್ತಮ ಪರಿಹಾರವಾಗಿದೆ. ಇದು ರಕ್ತ ತೆಳುವಾಗಲು ಸಹಾಯ ಮಾಡುವುದಲ್ಲದೇ, ದೇಹದಲ್ಲಿ ರಕ್ತದ ಸರಾಗ ಹರಿವಿಗೆ ಸಹಾಯ ಮಾಡುತ್ತದೆ. ಈ ಮೂಲಕ ಮುಟ್ಟಿನ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಪರಿಹಾರ ಪಡೆಯಲು ನಿಮ್ಮ ಪಿರಿಯಡ್ಸ್ ಸಮಯದಲ್ಲಿ ಇಂಗು ನೀರು ಕುಡಿಯಿರಿ.
6. ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು: ಇಂಗು ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮೇದೋಜ್ಜೀರಕ ಗ್ರಂಥಿಯ ಕೋಶಗಳನ್ನು ಉತ್ತೇಜಿಸುತ್ತದೆ. ಈ ಮೂಲಕ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.
7. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದು: ಇಂಗು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಸಂಯುಕ್ತಗಳನ್ನು ಹೊಂದಿದೆ. ಇದು ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮತ್ತಷ್ಟು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.