ಬ್ರಿಟನ್‌ನಲ್ಲಿ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಇಂಗ್ಲೆಂಡ್‌ನಲ್ಲಿ ಶಾಲೆಗಳು ಆರಂಭವಾಗಿ ತಿಂಗಳು ಕಳೆದಿದೆ.
ಸಾಕಷ್ಟು ಆರೋಗ್ಯ ತಜ್ಞರು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಮಕ್ಕಳಲ್ಲಿ ಶೇ.4.58ರಷ್ಟು ಸೋಂಕು ಹರಡುವಿಕೆ ಕಂಡುಬಂದಿದೆ. ಅಂದರೆ 25ರಲ್ಲಿ 1ಕ್ಕಿಂತ ಹೆಚ್ಚು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಕಳೆದ ವಾರ ಶೇ.2.81ರಷ್ಟು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇಂಗ್ಲೆಂಡ್‌ನಲ್ಲಿ ಕೊರೊನಾ ಸೋಂಕು ಒಟ್ಟಾರೆ ಹರಡುವಿಕೆಯನ್ನು ಗಮನಿಸುವುದಾದರೆ 85ರಲ್ಲಿ 1ರಷ್ಟಿತ್ತು, ಹಿಂದಿನ ವಾರ 90ರಲ್ಲಿ 1 ಮಂದಿಗೆ ಕೊರೊನಾ ಸೋಂಕಿತ್ತು. ಇದೀಗ 80ರಲ್ಲಿ ಒಬ್ಬರಿಗೆ ಸೋಂಕಿರುವುದು ಗೋಚರಿಸುತ್ತಿದೆ.
ಬ್ರಿಟನ್‌ನ ಲಸಿಕೆ ಮಾನ್ಯತೆ ನೀತಿಗೆ ಭಾರತ ತಿರುಗೇಟು ನೀಡಿದೆ. ಭಾರತಕ್ಕೆ ಪ್ರವೇಶಿಸುವ ಯಾವುದೇ ಬ್ರಿಟನ್ ನಾಗರಿಕರು 10 ದಿನಗಳ ಕ್ವಾರೆಂಟೈನ್‌ಗೆ ಒಳಪಡುವುದು ಕಡ್ಡಾಯವಾಗಲಿದೆ.
ಈ ಮೊದಲು ಬ್ರಿಟನ್ ಕೂಡ ಅಲ್ಲಿನ ಮಾನ್ಯತೆ ಪಡೆದ ಲಸಿಕೆಯನ್ನು ಪಡೆಯದಿದ್ದರೆ ಭಾರತದಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಿತ್ತು.
ಅವರು ಯಾವುದೇ ಕಂಪೆನಿಯ ಕೋವಿಡ್ ಲಸಿಕೆಯನ್ನು ಅಥವಾ ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದರೂ ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ಮೂಲಕ ಬ್ರಿಟನ್‌ಗೆ ಪ್ರತೀಕಾರದ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಭಾರತ ಇದೀಗ ಈ ನಿಯಮ ಜಾರಿಗೆ ತಂದಿದೆ. ಬ್ರಿಟನ್ ನಿಯಮಗಳು ಅಕ್ಟೋಬರ್ 4ರಿಂದ ಜಾರಿಗೆ ಬರಲಿವೆ. ಈ ಬಗ್ಗೆ ಭಾರತ ಆಕ್ಷೇಪ ಸಲ್ಲಿಸಿದ್ದರೂ ಬ್ರಿಟನ್ ಅದನ್ನು ಪರಿಗಣಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಅದೇ ದಿನದಿಂದ ಅದೇ ರೀತಿಯ ನಿಯಮ ಜಾರಿ ಮಾಡಲಾಗಿದೆ.
ಭಾರತದ ಕೋವಿಶೀಲ್ಡ್ ಲಸಿಕೆಯನ್ನು ಪಡೆಯದೆ, ಭಾರತದಿಂದ ಬಂದವರು ಕಡ್ಡಾಯ 10 ದಿನಗಳ ಕ್ವಾರೆಂಟೈನ್‌ಗೆ ಒಳಪಡಬೇಕು ಎಂಬ ವಿವಾದಾತ್ಮಕ ನಿಯಮ ಹೇರಿದ್ದ ಬ್ರಿಟನ್‌ಗೆ ಭಾರತ ತಿರುಗೇಟು ನೀಡಿದೆ. ಬ್ರಿಟನ್ ರೂಪಿಸಿದ್ದ ಕಾನೂನನ್ನೇ ಬ್ರಿಟನ್ ನಾಗರಿಕರ ಮೇಲೆಯೂ ವಿಧಿಸಲು ಭಾರತ ನಿರ್ಧರಿಸಿದೆ. ಭಾರತ ಸೇರಿದಂತೆ ಕೆಲವು ಆಯ್ದ ದೇಶಗಳಲ್ಲಿ ನಾಗರಿಕರು ಯಾವ ಕಂಪೆನಿಯ ಲಸಿಕೆಯನ್ನು ಪಡೆದುಕೊಂಡಿದ್ದರೂ ಅವರು ದೇಶಕ್ಕೆ ಕಾಲಿಟ್ಟ ಬಳಿಕ ಹತ್ತು ದಿನಗಳ ಕಾಲ ಕಡ್ಡಾಯ ಕ್ವಾರೆಂಟೈನ್‌ಗೆ ಒಳಪಡಬೇಕು ಎಂದು ಬ್ರಿಟನ್ ನಿಯಮ ರೂಪಿಸಿತ್ತು.
ಇದು ವಿವಾದ ಸೃಷ್ಟಿಸಿದ್ದರೂ ಹಾಗೂ ಭಾರತದ ಆಕ್ಷೇಪಣೆ ನಡುವೆಯೂ ಅದು ಸಮರ್ಥನೆ ಮಾಡಿಕೊಂಡಿತ್ತು. ಅದಕ್ಕೆ ಭಾರತ ಪ್ರತ್ಯುತ್ತರ ನೀಡಿದೆ ಅಕ್ಟೋಬರ್ 4ರಿಂದ ಭಾರತಕ್ಕೆ ಬರುವ ಎಲ್ಲ ಬ್ರಿಟನ್ ಪ್ರಜೆಗಳು, ಅವರ ಲಸಿಕೆ ಸ್ಥಿತಿಗತಿ ಏನೇ ಇದ್ದರೂ ಅವರು ಪ್ರಯಾಣಿಸುವ 72 ಗಂಟೆಗಳ ಮುನ್ನ, ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮತ್ತು ಭಾರತಕ್ಕೆ ಬಂದ 8ನೇ ದಿನ ಒಟ್ಟು ಮೂರು ಕೋವಿಡ್ 19 ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕಿದೆ.
ಭಾರತಕ್ಕೆ ಬಂದ ಹತ್ತು ದಿನಗಳವರೆಗೆ ಮನೆ ಅಥವಾ ಅವರು ಹೋಗಬೇಕಿರುವ ಸ್ಥಳದ ವಿಳಾಸದಲ್ಲಿ ಕ್ವಾರೆಂಟೈನ್ ಆಗಬೇಕು ಎಂದು ಮೂಲಗಳು ಹೇಳಿವೆ.
ಭಾರತದಲ್ಲಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ ಆಸ್ಟ್ರಾಜೆನಿಕಾ-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಅನುಮೋದಿಸಿದೆ.
ಈ ಲಸಿಕೆಯನ್ನು ಬ್ರಿಟನ್ ಕೂಡ ಭಾರತದಿಂದ ಆಮದು ಮಾಡಿಕೊಂಡು ತನ್ನ ಪ್ರಜೆಗಳಿಗೆ ನೀಡುತ್ತಿದೆ. ಅನೇಕ ದೇಶಗಳಲ್ಲಿ ಬೇರೆ ಹೆಸರಿನಲ್ಲಿ ಈ ಲಸಿಕೆ ಬಳಕೆಯಾಗುತ್ತಿದೆ. ಆದರೂ ಈ ಲಸಿಕೆಯನ್ನು ತಾನು ಪರಿಗಣಿಸುವುದಿಲ್ಲ ಎನ್ನುವ ಮೂಲಕ ಬ್ರಿಟನ್ ಭಾರತವನ್ನು ಅವಮಾನಿಸಿತ್ತು.