ನವದೆಹಲಿ: ಝೈಡಸ್ ಕ್ಯಾಡಿಲಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಸೂಜಿರಹಿತ ಝೈಕೋವ್ ಡಿ ಲಸಿಕೆಯನ್ನು ಶೀಘ್ರವೇ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಲ್ಲಿ ಒಳಗೊಳ್ಳಲಾಗುವುದು ಹಾಗೂ ಸದ್ಯಕ್ಕೆ ದೇಶದಲ್ಲಿ ಲಭ್ಯವಿರುವ ಲಸಿಕೆಗಳಿಗಿಂತ ಭಿನ್ನವಾಗಿ ಬೆಲೆ ನಿಗದಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
'ಝೋಕೋವ್ ಡಿ ಲಸಿಕೆ ಖರೀದಿ ಬೆಲೆ ಕುರಿತು ಸರ್ಕಾರ ಲಸಿಕೆ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದೆ. ಝೈಕೋವ್ ಡಿ ಲಸಿಕೆಯು ಮೂರು ಡೋಸ್‌ನದ್ದಾಗಿದ್ದು, ಸೂಜಿರಹಿತವಾಗಿರುವುದರಿಂದ ಈಗಿರುವ ಲಸಿಕೆಗಳಿಗಿಂತ ಬೆಲೆಯೂ ಭಿನ್ನವಾಗಿರುತ್ತದೆ' ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶೀಘ್ರವೇ ಝೈಕೋವ್ ಡಿ ಲಸಿಕೆಯನ್ನು ದೇಶದ ಲಸಿಕಾ ಅಭಿಯಾನದಲ್ಲಿ ಒಳಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲು ಅನುಮೋದನೆ ಪಡೆದುಕೊಂಡಿರುವ ವಿಶ್ವದ ಮೊದಲ ಡಿಎನ್‌ಎ ಕೊರೊನಾ ಲಸಿಕೆ ಕ್ಯಾಡಿಲಾ ಸಂಸ್ಥೆಯ ಝೈಕೋವ್ ಡಿ ಲಸಿಕೆಗೆ ಭಾರತದಲ್ಲಿ ಆಗಸ್ಟ್ ತಿಂಗಳಿನಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ.
ಭಾರತದಲ್ಲಿ 12-18 ವರ್ಷದವರಿಗೆ ನೀಡಲು ಅನುಮೋದನೆ ಪಡೆದುಕೊಂಡಿರುವ ಝೈಡಸ್ ಕ್ಯಾಡಿಲಾದ ಕೊರೊನಾ ಲಸಿಕೆಗಳ ಒಂದು ಕೋಟಿ ಡೋಸ್‌ಗಳು ಅಕ್ಟೋಬರ್‌ನಲ್ಲಿ ಲಭ್ಯವಿರಲಿವೆ ಎಂದು ಕಂಪನಿ ತಿಳಿಸಿದೆ.
ಆಗಸ್ಟ್ 20ರಂದು ಔಷಧ ನಿಯಂತ್ರಕ ಸಂಸ್ಥೆ, ದೇಶದಲ್ಲಿ 12-18 ವಯಸ್ಸಿನವರಿಗೆ ನೀಡಲು ಝೈಡಸ್ ಕ್ಯಾಡಿಲಾದ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿತು. ಆದರೆ ಈ ಲಸಿಕೆಯ ಬೆಲೆ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. 'ಝೈಡಸ್ ಕ್ಯಾಡಿಲಾ ಲಸಿಕೆಯ ಬೆಲೆ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಶೀಘ್ರವೇ ಈ ಸಂಬಂಧ ನಿರ್ಧಾರಕ್ಕೆ ಬರಲಾಗುವುದು' ಎಂದು ನೀತಿ ಆರೋಗ್ಯದ ಸದಸ್ಯ ವಿ.ಕೆ.ಪೌಲ್ ತಿಳಿಸಿದ್ದಾರೆ.
ಮೊದಲ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆ ಎಂದು ಕರೆಸಿಕೊಂಡಿರುವ ಝೈಕೋವ್-ಡಿ ಮೂರು ಡೋಸ್‌ಗಳ ಲಸಿಕೆಯಾಗಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿನ ಕ್ಯಾಡಿಲಾ ಹೆಲ್ತ್ ಕೇರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಝೈಕೋವ್-ಡಿ ಕೊರೊನಾ ಲಸಿಕೆ ದಕ್ಷತೆಯು ಶೇ.66.60ರಷ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಡೆಲ್ಟಾ ಪ್ರಭೇದದ ವಿರುದ್ಧವೂ ಪರಿಣಾಮಕಾರಿಯಾಗಿದೆ ಎಂದಿದೆ.
ಮುಂದಿನ ತಿಂಗಳಿನಿಂದ ಕ್ಯಾಡಿಲಾ ಹೆಲ್ತ್ ಕೇರ್‌ನ ಝೈಕೋವ್-ಡಿ ಲಸಿಕೆಯ ಸರಬರಾಜು ಆರಂಭವಾಗಲಿದ್ದು, ವರ್ಷಕ್ಕೆ 100ರಿಂದ 120 ದಶಲಕ್ಷ ಡೋಸ್‌ಗಳ ಲಸಿಕೆಯನ್ನು ಉತ್ಪಾದನೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ.
ZyCov-D ಅನ್ನು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಜೆಟ್ ಇಂಜೆಕ್ಟರ್ ಬಳಸಿ ದೇಹದ ಚರ್ಮದ ಕೋಶಗಳಿಗೆ ಚುಚ್ಚುವ ಔಷಧ ಇದಾಗಿರುವುದು ವಿಶೇಷವೆನಿಸಿದೆ.
ಇದೇ ಸಂದರ್ಭ, ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ವಿಳಂಬದ ಕುರಿತು ಮಾತನಾಡಿರುವ ಐಸಿಎಂಆರ್ ವ್ಯವಸ್ಥಾಪಕ ನಿರ್ದೇಶಕ ಡಾ. ಬಲರಾಂ ಭಾರ್ಗವ್, 'ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಯ ವೈಜ್ಞಾನಿಕ ದತ್ತಾಂಶ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಅಂತರರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ಅವಶ್ಯಕತೆಗಳನ್ನು ಪೂರೈಸುವ ಅಂಶಗಳನ್ನು ಪರಿಗಣಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಗೆ ಈ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗಿದೆ. ಶೀಘ್ರವೇ ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರ ಮಾಡಲಿದೆ' ಎಂದು ಹೇಳಿದರು.
ಭಾರತ ಸರ್ಕಾರವು ಕೊರೊನಾ ಸೋಂಕಿನ ವಿರುದ್ಧ ಆರು ಲಸಿಕೆಗಳನ್ನು ಅಧಿಕೃತಗೊಳಿಸಿದೆ. ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್, ಮಾಡೆರ್ನಾ ಹಾಗೂ ಜಾನ್ಸನ್ ಆಂಡ್ ಜಾನ್ಸನ್‌ನ ಒಂದೇ ಡೋಸ್ ಲಸಿಕೆ. ಈಚೆಗೆ ಝೈಕೋವ್ ಡಿ ಲಸಿಕೆ ಸೇರ್ಪಡೆಯಾಗಿದೆ.