ಮೈಸೂರು: ಮೈಸೂರು ದಸರಾ ಮಹೋತ್ಸವ 2021ಕ್ಕೆ ಶುಕ್ರವಾರ ತೆರೆ ಬೀಳಲಿದೆ. ದಸರಾದ ಕೇಂದ್ರಬಿಂದು ಜಂಬೂಸವಾರಿ 'ಅಭಿಮನ್ಯು' ಆನೆಯ ನೇತೃತ್ವದಲ್ಲಿ ಸಂಜೆ 5 ರಿಂದ 5.30 ರವರೆಗೆ ಅರಮನೆ ಆವರಣದಲ್ಲಿ ನಡೆಯಲಿದೆ.
ಇದೇ ಮೊದಲ ಬಾರಿಗೆ ಚಾಮುಂಡಿಬೆಟ್ಟದಿಂದ ಅರಮನೆಗೆ ಮೆರವಣಿಗೆಯಲ್ಲಿ ಅಂಬಾರಿ ಉತ್ಸವ ಮೂರ್ತಿಯನ್ನು ತರಲಾಗುತ್ತದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಶುಕ್ರವಾರ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಚಾಮುಂಡಿಬೆಟ್ಟದಿಂದ ಅಲಂಕೃತ ವಾಹನದಲ್ಲಿ ವಿವಿಧ ಕಲಾತಂಡಗಳ ಜೊತೆಗೆ ಮೆರವಣಿಗೆ ಮೂಲಕ ಅರಮನೆಗೆ ತರಲಾಗುತ್ತದೆ ಎಂದು ಹೇಳಿದ್ದಾರೆ.
ವಿಜಯದಶಮಿಯ ದಿನವಾದ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಉತ್ಸವ ಮೂರ್ತಿ ತರುವ ಅಲಂಕೃತ ವಾಹನದೊಂದಿಗೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡ, ವೇದಘೋಷ, ಚಂಡೆ, ನವದುರ್ಗೆಯರು ಸಾಗುವರು.
ಚಾಮಂಡಿ ಬೆಟ್ಟದಿಂದ ಹೊರಡುವ ಮೆರವಣಿಗೆ ತಾವರಕಟ್ಟೆ, ಇಟ್ಟಿಗೆಗೂಡು, ಹಾರ್ಡಿಂಚ್ ವೃತ್ತದ ಮೂಲಕ ಅರಮನೆ ಪ್ರವೇಶಿಸಲಿದೆ ಎಂದು ಸಚಿವರು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ವಿಜಯದಶಮಿ ದಿನ ಉತ್ಸವದ ಮೂಲಕ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ತರಲಾಗುತ್ತಿದೆ.
ಜಂಬೂ ಸವಾರಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಮೊದಲು ಸುತ್ತೂರು ಮಠಕ್ಕೆ ಭೇಟಿ ನೀಡುವ ಅವರು ಬಳಿಕ ವಿವಿಧ ಸಚಿವರ ಜೊತೆ ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿದ್ದಾರೆ.
ಶುಕ್ರವಾರ ಸಂಜೆ ಜಂಬೂ ಸವಾರಿ ಮೈಸೂರು ದಸರಾ ಮಹೋತ್ಸವ 2021ರ ಜಂಬೂ ಸವಾರಿ
15/10/2021ರ ಶುಕ್ರವಾರ ನಡೆಯಲಿದೆ. ಸಂಜೆ 4.36 ರಿಂದ 4.46ರ ತನಕ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನಡೆಯಲಿದೆ. ಸಂಜೆ 5 ರಿಂದ 5.30 ರ ತನಕ ಅರಮನೆ ಆವರಣದಲ್ಲಿ ಜಂಬೂ ಸವಾರಿ ನಡೆಯಲಿದೆ.
ವಿಜಯದಶಮಿಯಂದು ನಡೆಯುವ ಜಂಬೂ ಸವಾರಿಗೆ ಅರಮನೆ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಂಡಿದೆ. ಜಂಬೂಸವಾರಿಯಲ್ಲಿ 6 ಸ್ತಬ್ಧ ಚಿತ್ರಗಳ ಜೊತೆಗೆ ನೂರಾರು ಜಾನಪದ ಕಲಾವಿದರು ಸಾಗಲಿದ್ದಾರೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಈ ಬಾರಿಯೂ ಸರಳವಾಗಿ ದಸರಾ ಆಚರಿಸಲಾಗುತ್ತಿದೆ. ಶುಕ್ರವಾರ ಸಂಜೆ ಅರಮನೆ ಮುಂಭಾಗದಲ್ಲಿ ಮಾತ್ರ 'ಅಭಿಮನ್ಯು' ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿದೆ. ಈಗಾಗಲೇ ಆನೆಗಳಿಗೆ ತಾಲೀಮು ನೀಡಿ ಜಂಬೂಸವಾರಿಗೆ ಸಿದ್ಧಗೊಳಿಸಲಾಗಿದೆ.
ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತು 'ಅಭಿಮನ್ಯು' ಆನೆ ಸಾಗಲಿದೆ. ಕುಮ್ಕಿ ಆನೆಗಳಾಗಿ 'ಕಾವೇರಿ' ಹಾಗೂ 'ಚೈತ್ರಾ' ಹೆಜ್ಜೆ ಹಾಕಲಿವೆ. ನಿಶಾನೆ ಆನೆಯಾಗಿ 'ಧನಂಜಯ', ನೌಕತ್ ಸಾಲು ಆನೆಯಾಗಿ 'ಅಶ್ವತ್ಥಾಮ' ಮೆರವಣಿಗೆಯಲ್ಲಿ ಸಾಗಲಿದೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ 6 ಸ್ತಬ್ದ ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, 10ಕ್ಕೂ ಹೆಚ್ಚು ಕಲಾಪ್ರಕಾರಗಳ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಕೋವಿಡ ಪರಿಸ್ಥಿತಿಯ ಹಿನ್ನಲೆಯ ಜಂಬೂ ಸವಾರಿ ವೀಕ್ಷಣೆಗೆ ಕೆಲವು ಜನರಿಗೆ ಮಾತ್ರ ಪ್ರವೇಶವಿದೆ. ಲೈವ್ ಮೂಲಕ ಜಂಬೂ ಸವಾರಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ನೇರ ಪ್ರಸಾರ ವೀಕ್ಷಣೆ ವಿಜಯದಶಮಿ ಕಾರ್ಯಕ್ರಮಗಳನ್ನು ಫೇಸ್‌ಬುಕ್ ಯೂಟ್ಯೂಬ್ ಮತ್ತು ವೆಬ್‌ಸೈಟ್‌ನಲ್ಲಿ ಶುಕ್ರವಾರ ಸಂಜೆ 4.15ರಿಂದ ವೀಕ್ಷಣೆ ಮಾಡಬಹುದಾಗಿದೆ. ಈ ಕಾರ್ಯಕ್ರಮಗಳನ್ನು ವರ್ಚುವಲ್ ಆಗಿ ವೀಕ್ಷಿಸಲು ಈ ಲಿಂಕ್ ಗಳನ್ನು ಬಳಸಬಹುದು.
Facebook Link.
https://www.facebook.com/mysorevarthe/
YouTube Link
https://tinyurl.com/mysurudasara2021
Website Link
https://mysoredasara.gov.in/