ನವದೆಹಲಿ: ಉತ್ತರ ಪ್ರದೇಶದ ರೈತರೊಬ್ಬರು ಬೆಳೆದ ಭತ್ತವನ್ನು ಮಾರಾಟ ಮಾಡಲಾಗದೇ, ನೊಂದು ಫಸಲಿಗೆ ಬೆಂಕಿ ಹಚ್ಚುತ್ತಿರುವ ವಿಡಿಯೊ ತುಣುಕನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೊ ಜೊತೆಗೆ 'ನಮ್ಮ ಕೃಷಿ ನೀತಿಗಳನ್ನು ಮರುಪರಿಶೀಲಿಸಬೇಕು' ಎಂದು ಅವರು ಬರೆದಿದ್ದಾರೆ.
'ಉತ್ತರ ಪ್ರದೇಶದ ರೈತ ಸಮೋದ್ ಸಿಂಗ್, ಬೆಳೆದ ಭತ್ತವನ್ನು ಮಾರಲು ಹದಿನೈದು ದಿನದಿಂದ ಎಲ್ಲ ಮಂಡಿಗಳಿಗೂ ಅಲೆದಾಡಿದ್ದಾರೆ. ಮಾರಲಾಗದೇ ಹತಾಶೆಯಿಂದ ಬೆಳೆಗೆ ಬೆಂಕಿ ಇಟ್ಟಿದ್ದಾರೆ. ಈ ವ್ಯವಸ್ಥೆ ರೈತರನ್ನು ಎಲ್ಲಿಗೆ ತಂದಿದೆ? ನಮ್ಮ ಕೃಷಿ ನೀತಿಗಳನ್ನು ಮರುಪರಿಶೀಲಿಸುವ ಅಗತ್ಯವಿದೆ' ಎಂದೂ ತಿಳಿಸಿದ್ದಾರೆ.
ಮೂರು ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಈಗಾಗಲೇ ಸಹಾನುಭೂತಿ ಪ್ರದರ್ಶಿಸಿರುವ ವರುಣ್ ಗಾಂಧಿ ಅವರು, ಕೇಂದ್ರದ ವಿರುದ್ಧ ನೇರ ದಾಳಿ ನಡೆಸದೇ, ಕೃಷಿ ಸಂಬಂಧಿತ ವಿಚಾರಗಳನ್ನು ತಡವಾಗಿ ನಿರ್ವಹಣೆ ಮಾಡುತ್ತಿರುವ ಕ್ರಮವನ್ನು ಟೀಕಿಸಿದ್ದಾರೆ.