ಕರೂರ್: ವಾಷಿಂಗ್ ಮಷೀನ್, ಗ್ರೈಂಡರ್, ಮಿಕ್ಸರ್, ಪ್ರೆಷರ್ ಕುಕ್ಕರ್ ಹಾಗೂ ಇನ್ನೂ ಅನೇಕ ಬಹುಮಾನಗಳನ್ನು ಲಸಿಕೆ ಹಾಕಿಸಿಕೊಂಡು ಗೆಲ್ಲಬಹುದಾದ ಸುವರ್ಣಾವಕಾಶ ಬಂದಿದೆ.
ತಮಿಳುನಾಡಿನ ಕರೂರ್ ನ ಜಿಲ್ಲಾಧಿಕಾರಿ ಟಿ ಪ್ರಭುಶಂಕರ್ ಈ ಯೋಜನೆಯನ್ನು ಪ್ರಕಟಿಸಿದ್ದು ಭಾನುವಾರ (ಅ.10) ರಂದು ನಡೆಯಲಿರುವ ಬೃಹತ್ ಲಸಿಕಾ ಮೇಳದಲ್ಲಿ ಅತಿ ಹೆಚ್ಚು ಮಂದಿ ಲಸಿಕೆ ಪಡೆಯುವುದನ್ನು ಉತ್ತೇಜಿಸುವುದಕ್ಕಾಗಿ ಈ ಆಫರ್ ನ್ನು ಘೋಷಿಸಲಾಗಿದೆ.
ತಮಿಳುನಾಡಿನ ಸರ್ಕಾರದ ಘೋಷಣೆಯ ಭಾಗವಾಗಿ ಕರೂರ್ ಜಿಲ್ಲೆಯಾದ್ಯಂತ ಮೆಗಾ ಲಸಿಕೆ ಕಾರ್ಯಕ್ರಮ ಪ್ರತಿ ವಾರ ನಡೆಯಲಿದ್ದು 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ನೀಡಲಾಗುತ್ತಿದೆ.
ಇದಿಷ್ಟೇ ಅಲ್ಲದೇ ಓರ್ವ ವ್ಯಕ್ತಿ ಎಷ್ಟು ಮಂದಿಯನ್ನು ಲಸಿಕೆ ಹಾಕಿಸಲು ಕರೆತರುತ್ತಾರೆ ಎಂಬುದರ ಆಧಾರದಲ್ಲಿ 5 ರೂಪಾಯಿಗಳ ಪ್ರೋತ್ಸಾಹಧನವನ್ನೂ ನೀಡಲಾಗುತ್ತದೆ. ಹಾಗೂ ಲಸಿಕೆ ಹಾಕಿಸಿಕೊಳ್ಳುವವರನ್ನೂ ಬಹುಮಾನ ಪಡೆಯುವುದಕ್ಕಾಗಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಬಹುಮಾನವನ್ನಾಗಿ ವಾಷಿಂಗ್ ಮಷೀನ್ ಇದ್ದರೆ, ಎರಡನೆಯದ್ದು ವೆಟ್ ಗ್ರೈಂಡರ್, ಮೂರನೆಯದ್ದು ಮಿಕ್ಸರ್ ಗ್ರೈಂಡರ್ ನಾಲ್ಕನೇ ಸ್ಥಾನ ಗಳಿಸಿದ 25 ಮಂದಿಗೆ ಪ್ರಷರ್ ಕುಕ್ಕರ್ ನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ. ಇನ್ನಿತರ ಗೃಹೋಪಯೋಗಿ ವಸ್ತುಗಳನ್ನು 100 ಮಂದಿಗೆ ಸಮಾಧಾನಕರ ಬಹುಮಾನವನ್ನಾಗಿ ಘೋಷಣೆ ಮಾಡಲಾಗುತ್ತದೆ. ಲಸಿಕೆ ಕ್ಯಾಂಪ್ ಗಳಿಗೆ 25 ಮಂದಿಯನ್ನು ಕರೆತರುವ ವ್ಯಕ್ತಿಗಳ ಹೆಸರನ್ನು ಲಕ್ಕಿ ಡ್ರಾಗೆ ಆಯ್ಕೆ ಮಾಡಲಾಗುತ್ತದೆ" ಎಂದು ಪ್ರಭು ಶಂಕರ್ ತಿಳಿಸಿದ್ದಾರೆ.