ಬದಿಯಡ್ಕ: ಯಕ್ಷಗಾನ ಕಲೆ ಕೇವಲ ಮನೋರಂಜನೆಯಷ್ಟೇ ಅಲ್ಲದೆ ಭೌದ್ದಿಕ ವಿಕಾಸ, ಜಾಗೃತಿಗೆ ಕಾರಣವಾಗುವ ಕಲಾ ಪ್ರಕಾರವಾಗಿ ಜಾಗತಿಕ ಮಟ್ಟದಲ್ಲೇ ಸ್ಥಾನ ಪಡೆದಿದೆ. ಪರಂಪರೆಯ ಕಲ್ಪನೆಯೊಂದಿಗೆ ಸಮಾಜವನ್ನು ಸಮರ್ಥವಾಗಿ ಕಟ್ಟುವ ಪ್ರಕ್ರಿಯೆ ನಿತ್ಯ ನಿರಂತರವಾಗಿ ಪರಿವರ್ತನೆಗೆ ಕಾರಣವಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ಅವರು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಗಡಿನಾಡ ಯಕ್ಷಗಾನ ಅಕಾಡೆಮಿ ಕಾಸರಗೋಡು ಇದರ ಜಂಟಿ ಆಶ್ರಯದಲ್ಲಿ ಕೊಲ್ಲಂಗಾನದ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಆಯೋಜಿಸಲಾದ ಜಾನಪದ ಲೋಕ ಪ್ರಶಸ್ತಿ ವಿಜೇತ ಯಕ್ಷಗಾನ ಗುರು ಪಡುಮಲೆ ಜಯರಾಮ ಪಾಟಾಳಿ ಅವರು ನಿರ್ದೇಶಿಸಿರುವ ಕೊರೋನಾಸ್ತ್ರ ಯಕ್ಷಗಾನ ಪ್ರದರ್ಶನ, ಗೌರವಾರ್ಪಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಪರಂಪರೆ ಇಷ್ಟು ಸುಧೀರ್ಘ ಕಾಲ ನೆಲೆಗೊಂಡಿರುವುದರ ಹಿಂದೆ ಹಿರಿಯ ಪರಂಪರೆಗಳ ಅಹರ್ನಿಶಿಯಾದ ಸೇವಾ ತತ್ಪರ ಚಿಂತನೆ, ನಿಸ್ವಾರ್ಥ ಸೇವೆಯ ಬೃಹತ್ ತ್ಯಾಗಗಳೇ ಇದೆ. ಜನ ಸಮೂಹದ ನೆಮ್ಮದಿಯ ಬದುಕಿಗೆ ಕಾರಣಕರ್ತರಾದ ಬೆರಳೆಣಿಕೆಯ ಸಾಧಕ ಶ್ರೇಷ್ಠರನ್ನು ಗುರುತಿಸಿ ಗೌರವಿಸುವುದು ನಮ್ಮ ಪರಂಪರೆಯ ಹೆಗ್ಗುರುತು ಎಂದವರು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅ|ಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜವನ್ನು ಸಕಾರಾತ್ಮಕ ಚಿಂತನೆಗಳಿಗೆ ಬೆಂಬಲಿಸುವ ವ್ಯಕ್ತಿ-ವ್ಯಕ್ತಿತ್ವಗಳನ್ನು ಗೌರವಿಸುವುದು ಸಮಾಜದ ಜವಾಬ್ದಾರಿಯೂ ಆಗಿದೆ. ತ್ಯಾಗಶೀಲ ಮನಸ್ಸುಗಳಿಂದ ಜಗತ್ತು ಭದ್ರನೆಲೆಯಿಂದ ಶ್ರೀಮಂತಗೊಂಡಿದೆ. ಕೊರೊನಾ ಸವಾಲುಗಳ ಕಾಲಘಟ್ಟದಲ್ಲಿ ಸಂಕಷ್ಟಮಯ ಬದುಕಿನಲ್ಲಿರುವ ಯಕ್ಷಗಾನ ಕಲಾವಿದರ ಕಿಂಚಿತ್ ಸೇವೆಗೆ ತೊಡಗಿಸಿಕೊಂಡಿರುವ ಗಡಿನಾಡ ಯಕ್ಷಗಾನ ಅಕಾಡೆಮಿಯ ನಿಸ್ಪøಹ ಸೇವೆ ಅನುಕರಣೀಯ ಎಂದು ತಿಳಿಸಿದರು.
ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಉಪಸ್ಥಿತರಿದ್ದು ಆಈರ್ವಚನ ನೀಡಿದರು. ಕೆ.ಟಿ.ವೇಣುಗೋಪಾಲ್ ಸ್ಮಾರಕ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ವಿಜೇತ, ಪತ್ರಕರ್ತ ಅಚ್ಚುತ ಚೇವಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಸಾಮಾಜಿಕ, ಧಾರ್ಮಿಕ ಮುಂದಾಳು ಚಂದ್ರಹಾಸ ಮಾಸ್ತರ್ ಮುನಿಯೂರು, ಸಾಮಾಜಿಕ ಕಾರ್ಯಕರ್ತ ಜಯಾನಂದ ಕುಳ, ಧಾರ್ಮಿಕ ನೇತಾರ, ಸಂಘಟಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಉಪಸ್ಥಿತರಿದ್ದು ಶುಭಹಾರೈಸಿದರು. ಯಕ್ಷಗಾನ ಗುರು ಜಯರಾಮ ಪಾಟಾಳಿ ಪಡುಮಲೆ, ಪ್ರೊ.ಎ.ಶ್ರೀನಾಥ್ ಉಪಸ್ಥಿತರಿದ್ದರು.
ಈ ಸಂದರ್ಭ ವಯೋವೃದ್ದೆ, ಸೇವಾ ಸಾಧಕಿ ಮಾತೃಶ್ರೀ. ಶಾರದಾ ಅನಂತಪದ್ಮನಾಭ ಉಪಾಧ್ಯಾಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ವಿಜೇತ ಪತ್ರಕರ್ತ ಅಚ್ಚುತ ಚೇವಾರು ಅವರನ್ನು ಗೌರವಿಸಲಾಯಿತು. ಯಕ್ಷಗಾನ ಕಲಾವಿದ ಮಾಧವ ನೆಟ್ಟಣಿಗೆ ಸ್ವಾಗತಿಸಿ, ಜಾನಪದ ಸಂಘಟಕ ಅಖಿಲೇಶ್ ನಗುಮುಗಂ ವಂದಿಸಿದರು. ಯಕ್ಷಗಾನ ಕಲಾವಿದ ವೀ.ಜಿ.ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಕಲಾವಿದರ ಕೂಡುವಿಕೆಯಲ್ಲಿ ಪಡುಮಲೆ ಜಯರಾಮ ಪಾಟಾಳಿ ಅವರ ನಿರ್ದೇಶನದಲ್ಲಿ ಕೊರೋನಾಸ್ತ್ರ ಯಕ್ಷಗಾನ ಪ್ರದರ್ಶನ ನಡೆಯಿತು.