ಕುಂಬಳೆ: ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು.ಪಠ್ಯಕ್ಕೆ ಪೂರಕವಾದ ಎಲ್ಲ ವಿಷಯಗಳನ್ನೂ ಬೋಧಿಸಿ ವಿದ್ಯಾರ್ಥಿಗಳ ಅರಿವಿನ ವಿಸ್ತಾರಕ್ಕೆ ಪ್ರಯತ್ನಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ, ಸಂಶೋಧಕ ಡಾ.ಹರಿಕೃಷ್ಣ ಭರಣ್ಯ ತಿಳಿಸಿದರು.
ಕಾಸರಗೋಡಿನ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ವಿಂಶತಿ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ "ಗುರು ನಮನ" ಸ್ವೀಕರಿಸಿ ಅವರು ಮಾತನಾಡಿದರು.
ಡಾ.ಭರಣ್ಯ ಅವರ ನಾರಾಯಣಮಂಗಲದಲ್ಲಿರುವ ಸ್ವಗೃಹದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಗಮಕ ಕಲಾಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್ ವಹಿಸಿದ್ದರು. ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಕೆ.ವಾಮನ ರಾವ್ ಬೇಕಲ್ ಮತ್ತು ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್ ಅವರು ಡಾ.ಹರಿಕೃಷ್ಣ ಭರಣ್ಯ ದಂಪತಿಗಳನ್ನು ಗೌರವಿಸಿ ಗುರು ನಮನ ಸಲ್ಲಿಸಿದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಅಧ್ಯಾಪಕ ವಿಶಾಲಾಕ್ಷ ಪುತ್ರಕಳ ಅ|ಭಿನಂದಿಸಿ ಮಾತನಾಡಿದರು. ಕನ್ನಡ ಭವನ ಗ್ರಂಥಾಲಯದ ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ್ ಕೂಡ್ಲು ಸ್ವಾಗತಿಸಿ, ನಿರೂಪಿಸಿದರು. ಕಾರ್ತಿಕ್ ಕಾಸರಗೋಡು ವಂದಿಸಿದರು.