ನವದೆಹಲಿ: ಕಚ್ಚಾ ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಕೃಷಿ ಸೆಸ್ ಪ್ರಮಾಣವನ್ನು ಕಡಿತ ಮಾಡಿದೆ.
2022ರ ಮಾರ್ಚ್ 31ರವರೆಗೆ ಮೂಲ ಕಸ್ಟಮ್ಸ್ ಸುಂಕ ಹಾಗೂ ಕೃಷಿ ಸೆಸ್ ಅನ್ನು ಕಡಿತಗೊಳಿಸಿರುವ ಕ್ರಮವು ಹಬ್ಬದ ಸೀಸನ್ ನಲ್ಲಿ ಬೆಲೆಗಳನ್ನು ತಗ್ಗಿಸಲು ಮತ್ತು ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸುಂಕ ಕಡಿತವು ಅಕ್ಟೋಬರ್ 14ರಿಂದ ಜಾರಿಗೆ ಬರಲಿದ್ದು, ಮಾರ್ಚ್ 31, 2022 ರವರೆಗೆ ಜಾರಿಯಲ್ಲಿರುತ್ತದೆ ಎಂದು ಪರೋಕ್ಷ ತೆರಿಗೆಮತ್ತು ಕೇಂದ್ರೀಯ ಕಸ್ಟಮ್ಸ್ ಮಂಡಳಿ(ಸಿಬಿಐಸಿ) ಅಧಿಸೂಚನೆಯಲ್ಲಿ ತಿಳಿಸಿದೆ.
ಕಚ್ಚಾ ತಾಳೆ ಎಣ್ಣೆ ಮೇಲಿನ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್(ಎಐಡಿಸಿ) ಈಗ ಶೇಕಡ 7.5ರಷ್ಟಾಗಿದೆ. ಜೊತೆಗೆ ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ದರವು ಶೇಕಡ 5ರಷ್ಟಾಗಿದೆ. ಕಡಿತದ ನಂತರ, ತಾಳೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ವಿಧಗಳ ಮೇಲೆ ಪರಿಣಾಮಕಾರಿ ಕಸ್ಟಮ್ಸ್ ಸುಂಕ ಕ್ರಮವಾಗಿ ಶೇ .8.25, ಶೇ .5.5 ಮತ್ತು ಶೇ .5.5 ಆಗಿರುತ್ತದೆ. ಇದಲ್ಲದೆ, ಸಂಸ್ಕರಿಸಿದ ಸೂರ್ಯಕಾಂತಿ, ಸೋಯಾಬೀನ್, ಪಾಮೋಲಿನ್ ಮತ್ತು ತಾಳೆ ಎಣ್ಣೆಯ ಮೂಲ ಕಸ್ಟಮ್ಸ್ ಸುಂಕವನ್ನು ಪ್ರಸ್ತುತ ಶೇಖಡ 32.5ರಿಂದ 17.5ಕ್ಕೆ ತಗ್ಗಿಸಲಾಗಿದೆ.