ಶ್ರೀನಗರ: ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ನಿರಂತರ ದಾಳಿಯಿಂದಾಗಿ ವಲಸೆ ಕಾರ್ಮಿಕರು ಭಯಭೀತರಾಗಿದ್ದಾರೆ. ಮುಂದೆ ಏನು ಮಾಡಬೇಕು ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರು ಸಿಲುಕಿಕೊಂಡಿದ್ದಾರೆ.
ಕೆಲವರು ತಕ್ಷಣವೇ ಕಾಶ್ಮೀರವನ್ನು ತೊರೆಯಲು ನಿರ್ಧರಿಸಿದ್ದರೆ, ಇನ್ನು ಕೆಲವರು ತಮ್ಮ ಬಾಕಿ ಇರುವ ಕೆಲಸವನ್ನು ಮುಗಿಸಿ, ಹಣದ ಕೊಡುಕೊಳ್ಳುವಿಗೆ ಪೂರ್ಣಗೊಳಿಸಿ ಹೊರಡಲು ನಿರ್ಧರಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಉಗ್ರಗಾಮಿಗಳಿಂದ ನಡೆದ ಪ್ರತ್ಯೇಕ ದಾಳಿಯಲ್ಲಿ ಐವರು ವಲಸೆ ಕಾರ್ಮಿಕರು ಹತರಾಗಿದ್ದರು. ಇದರಲ್ಲಿ ನಾಲ್ವರು ಮುಸ್ಲಿಮೇತರರು ಮತ್ತು ಒಬ್ಬರು ಮುಸ್ಲಿಂ ಧರ್ಮೀಯರರಾಗಿದ್ದರು. ಜತೆಗೆ, ಈ ತಿಂಗಳಲ್ಲಿ ಹೆಸರಾಂತ ಕಾಶ್ಮೀರಿ ಪಂಡಿತ ಉದ್ಯಮಿ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಮೂವರನ್ನೂ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ.
ಕಾಶ್ಮೀರದಲ್ಲಿ ನಡೆಯುತ್ತಿರುವ ದಾಳಿಗಳು ಸ್ಥಳೀಯ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಮಾತ್ರವೇ ಭೀತಿ ಹುಟ್ಟಿಸಿಲ್ಲ. ಬದಲಾಗಿ, ಸ್ಥಳೀಯರಲ್ಲದ ಕಾರ್ಮಿಕರು, ಮುಸ್ಲಿಮರು ತಮ್ಮ ಸುರಕ್ಷತೆ ಬಗ್ಗೆ ಆತಂಕಗೊಂಡಿದ್ಧಾರೆ.
'ಇಂತಹ ದುಸ್ಥಿತಿ ನಮಗೆ ಎದುರಾಗುತ್ತದೆ ಎಂದು ನಾವು ಊಹಿಸಿರಲಿಲ್ಲ. ಹೀಗಾಗಿ ನಾವು ಆಘಾತಕ್ಕೊಳಗಾಗಿದ್ದೇವೆ' ಎಂದು ವಲಸೆ ಕಾರ್ಮಿಕರ ಗುಂಪು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳ ಕುರಿತು ವಲಸಿಗರು ಗುಂಪುಗೂಡಿ ಚರ್ಚಿಸಲಾರಂಭಿಸಿದ್ದಾರೆ. 'ನಾವು ತಕ್ಷಣ ಕಾಶ್ಮೀರವನ್ನು ತೊರೆಯಬೇಕೋ ಅಥವಾ ಇಲ್ಲೇ ಉಳಿಯಬೇಕೊ ಎಂಬ ಸಂದಿಗ್ಧತೆಯಲ್ಲಿದ್ದೇವೆ. ಸರ್ಕಾರ ನಮ್ಮನ್ನು ಸಂಪರ್ಕಿಸಿಲ್ಲ. ನಾವು ಹಿಂತಿರುಗಿದರೆ ನಷ್ಟ ಎದುರಿಸಬೇಕಾಗುತ್ತದೆ. ಇಲ್ಲೇ ಉಳಿದರೆ ಉಗ್ರರಿಗೆ ಗುರಿಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ,' ಎಂದು ಅವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ವಲಸೆ ಕಾರ್ಮಿಕರಲ್ಲಿ ಈ ಮಟ್ಟದ ಭೀತಿಯನ್ನು ನಾನು ನೋಡಿಯೇ ಇಲ್ಲ ಎಂದು ಕಾಶ್ಮೀರದಲ್ಲಿ 15 ವರ್ಷಗಳಿಂದ ಗೋಲ್-ಗಪ್ಪ ಮಾರಾಟ ಮಾಡಿ ಜೀವನ ಸಾಗಿಸುವ ಬಿಹಾರದ ರಾಜೇಶ್ ಕುಮಾರ್ ಹೇಳಿದ್ದಾರೆ. '2008, 2010, 2016ರ ಹಿಂಸಾಚಾರ ಮತ್ತು 2019ರ ಆಗಸ್ಟ್‌ನಲ್ಲಿ ಸಂವಿಧಾನದ ವಿಧಿ 370 ರದ್ದಾದ ನಂತರವೂ ನಾನು ಯಾವುದೇ ಭಯ ಅಥವಾ ಸಮಸ್ಯೆಗಳಿಲ್ಲದೆ ಕಾಶ್ಮೀರದಲ್ಲಿ ಉಳಿದುಕೊಂಡೆ. ಆದರೆ ಕಳೆದ 10 ದಿನಗಳಿಂದ, ಪ್ರತಿ ಕ್ಷಣವೂ 'ಸಾವು ನನ್ನನ್ನು ಹಿಂಬಾಲಿಸುತ್ತಿದೆ' ಎಂದು ಅನ್ನಿಸುತ್ತಿದೆ,' ಎಂದು ರಾಜೇಶ್ ಹೇಳಿಕೊಂಡಿದ್ದಾರೆ.
ಕಾಶ್ಮೀರದಲ್ಲಿ ಉಳಿಯದಂತೆ ವಲಸೆ ಕಾರ್ಮಿಕರಿಗೆ ಕುಟುಂಬಸ್ಥರು ಊರುಗಳಿಂದ ಕರೆ ಮಾಡಿ ಹೇಳುತ್ತಿದ್ದಾರೆ.
'ನಾವು ನೂರಾರು ಮೈಲುಗಳಾಚೆಯಿಂದ ಇಲ್ಲಿಗೆ ಜೀವನೋಪಾಯಕ್ಕಾಗಿ ಬಂದಿರುತ್ತೇವೆ. ಕುಟುಂಬಗಳ ನಿರ್ವಹಣೆ ಕಾರಣಕ್ಕಾಗಿ ನಾವು ಇಲ್ಲಿ ದುಡಿಯುತ್ತಿದ್ದೇವೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲೆಂದು ಇಲ್ಲಿ ಶ್ರಮಿಸುತ್ತಿದ್ದೇವೆ. ಆದರೆ ಇಲ್ಲಿರುವುದರಿಂದ ನಮ್ಮ ಜೀವಕ್ಕೆ ಬೆಲೆ ಇಲ್ಲವಾಗಿದೆ,' ಎಂದು ಉತ್ತರ ಪ್ರದೇಶದ ಮೇಸ್ತ್ರಿ ಜಮೀಲ್ ಹೇಳಿದ್ದಾರೆ.
ಇತ್ತೀಚಿನ ಕೆಲ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ವಲಸಿಗರು ತಮ್ಮ ಊರುಗಳತ್ತ ಹೋಗುತ್ತಿದ್ಧಾರೆ ಎಂದು ಶ್ರೀನಗರದ ಟ್ಯಾಕ್ಸಿ ಸ್ಟ್ಯಾಂಡ್ ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
'ತಿಂಗಳ ಆರಂಭದಲ್ಲಿ 10-12 ಕ್ಯಾಬ್‌ಗಳು ಮಾತ್ರವೇ ಶ್ರೀನಗರದಿಂದ ಜಮ್ಮುವಿಗೆ ಹೋಗುತ್ತಿದ್ದವು. ಆದರೆ ಈಗ ನಮ್ಮ ನಿಲ್ದಾಣದಲ್ಲಿರುವ ಎಲ್ಲಾ ಕ್ಯಾಬ್‌ಗಳು ಜಮ್ಮುವಿಗೆ ಹೋಗುತ್ತಿವೆ. ಜಮ್ಮುವಿನತ್ತ ಪ್ರಯಾಣ ಏರುತ್ತಲೇ ಇದೆ,' ಎಂದು ಅವರು ವಿವರಿಸಿದ್ದಾರೆ.