ನವದೆಹಲಿ: "ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ರೈತ ಪರವಾದ ಸರ್ಕಾರ, ಆದರೆ ಉದ್ಯಮಿ ಸ್ನೇಹಿ," ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಬುಧವಾರ ಹೇಳಿದ್ದಾರೆ. ಹೂಡಿಕೆದಾರರ ಶೃಂಗಸಭೆಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ, "ಕೇಂದ್ರ ಸರ್ಕಾರ ರೈತ ಪರ ಆದರೆ ಉದ್ಯಮಿ ಸ್ನೇಹಿ," ಎಂದು ತಿಳಿಸಿದ್ದಾರೆ.
"ನಮ್ಮ ಸರ್ಕಾರವು ರೈತರ ಪರವಾಗಿ ಇರುವಂತಹ ಸರ್ಕಾರ ಆದರೆ ಉದ್ಯಮಿ ಸ್ನೇಹಿ ಸರ್ಕಾರ. ದೇಶದಲ್ಲಿ ಕೈಗಾರಿಕೆಗಳು ಮುಂದುವರೆಯುವಂತೆ ಹಾಗೂ ಉಳಿಯುವಂತೆ ನೋಡಿಕೊಳ್ಳುವ ಕಾರ್ಯವನ್ನು ಮಾಡುತ್ತೇವೆ," ಎಂದು ಹೇಳಿದರು. "ಸರಬರಾಜು ಮಾಡುವ ಸಂದರ್ಭದಲ್ಲಿ ಭಾರತೀಯ ಸಂಸ್ಥೆಗಳು ಯಾವುದೇ ಮೋಸವನ್ನು ಮಾಡುವುದಿಲ್ಲ. ಗುಣಮಟ್ಟವನ್ನು ಕಾಪಾಡಿಕೊಳ್ಳುವುದೇ ನಮ್ಮ ಮುಖ್ಯ ಉದ್ದೇಶ," ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ವಿವರಿಸಿದರು.
' "ವಿಶ್ವದಲ್ಲಿ ಮೊದಲ ಕೊರೊನಾವೈರಸ್ ಅಲೆ ಕಾಣಿಸಿಕೊಂಡ ಸಂದರ್ಭದಲ್ಲಿ ಯಾವುದೇ ದೇಶದಲ್ಲಿ ಅದಕ್ಕೆ ಬೇಕಾದ ಔಷಧಗಳು ಇರಲಿಲ್ಲ. ಆದರೆ ನಾವು ನಮ್ಮ ದೇಶದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದು ಮಾತ್ರವಲ್ಲದೇ, ಈ ಸೋಂಕಿಗೆ ಬೇಕಾದ ಔಷಧಿಗಳು ಅವಶ್ಯಕತೆ ಪೂರೈಸಿದೆವು. ಅಷ್ಟು ಮಾತ್ರವಲ್ಲದೇ ಸುಮಾರು 150 ದೇಶಗಳಿಗೆ ಕೊರೊನಾ ವೈರಸ್ ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ನಾವು ಔಷಧಿಯನ್ನು ಸರಬರಾಜು ಮಾಡಿದೆವು," ಎಂದು ತಿಳಿಸಿದರು.
"ಪ್ರಸ್ತುತ ಭಾರತವು ಜೆನೆರಿಕ್ ಔಷಧಗಳನ್ನು ಅತೀ ಹೆಚ್ಚು ಉತ್ಪಾದನೆ ಮಾಡುವ ಹಾಗೂ ಅದನ್ನು ಅತೀ ಹೆಚ್ಚು ಸರಬರಾಜು ಮಾಡುವ ದೇಶವಾಗಿದೆ. ನಾವು ವಸುದೈವ ಕುಟುಂಬದ ಮೇಲೆ ನಂಬಿಕೆ ಉಳ್ಳವರು. ನಾವು ಜಗತ್ತಿನ ಎಲ್ಲಾ ದೇಶಗಳಲ್ಲಿ ಕೈಗೆಟಕುವ ದರದಲ್ಲಿ ಔಷಧಿಗಳು ಲಭ್ಯವಾಗುವಂತೆ ನೋಡಿಕೊಳ್ಳುತ್ತಿದ್ದೇವೆ," ಎಂದರು.
ಪಿಎಲ್‌ಐ ಫಾರ್ಮಾಸ್ಯುಟಿಕಲ್ಸ್ ಯೋಜನೆಯು ಸುಮಾರು 15000 ಕೋಟಿ ವೆಚ್ಚದ ಯೋಜನೆ ಆಗಿದೆ. ಈ ಯೋಜನೆಯಡಿಯಲ್ಲಿ ಪಾಲುದಾರರು ಆಗಲು ಸುಮಾರು ಹಲವಾರು ಸಂಸ್ಥೆಗಳು ಆಸಕ್ತಿಯನ್ನು ತೋರಿಸಿದೆ. 278 ಕಂಪನಿಗಳು ಈ ಪಿಎಲ್‌ಐ ಫಾರ್ಮಾಸ್ಯುಟಿಕಲ್ಸ್ ಯೋಜನೆಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಕೆ ಮಾಡಿದೆ. ಪಿಎಲ್‌ಈ ಯೋಜನೆಯಡಿಯಲ್ಲಿ ಈಗಾಗಲೇ 13 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಈ ಹೂಡಿಕೆದಾರರ ಶೃಂಗಸಭೆಯ ಉದ್ದೇಶವೇನು?
ಹೂಡಿಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಈ ಶೃಂಗಸಭೆ ಏರ್ಪಡಿಸಲಾಗಿದೆ. ಫಾರ್ಮಾಸ್ಯುಟಿಕಲ್ಸ್ ಮತ್ತು ವೈದ್ಯಕೀಯ ಸಾಧನಗಳ ಉತ್ಪಾದನೆಯಲ್ಲಿ ಅವಕಾಶಗಳು ಮತ್ತು ಪಾಲುದಾರಿಕೆ ಈ ಹೂಡಿಕೆದಾರರ ಶೃಂಗಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಮಾಧ್ಯಮದ ವರದಿಗಳು ಉಲ್ಲೇಖ ಮಾಡಿದೆ.
ಈ ಸಂದರ್ಭದಲ್ಲೇ ಭಾರತವನ್ನು ಉತ್ಪದನಾ ಕೇಂದ್ರವನ್ನಾಗಿ ಮಾಡಲು ಫಾರ್ಮಾ ಉದ್ಯಮಗಾರರಲ್ಲಿ ಮನ್ಸುಖ್ ಮಾಂಡವಿಯಾ ಮನವಿ ಮಾಡಿದ್ದಾರೆ. ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರು ಕೂಡಾ ಆಗಿರುವ ಮನ್ಸುಖ್ ಮಾಂಡವಿಯಾ, "ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗಾಗಲೇ ಹೂಡಿಕೆದಾರರ ಬಳಿ ಏನನ್ನು ಹೇಳಿದ್ದರೋ ಅದನ್ನೇ ನಾನು ಈಗ ಪುನರುಚ್ಛರಿಸಲು ಬಯಸುತ್ತೇನೆ. ಬನ್ನಿ ಭಾರತದಲ್ಲಿ ಉತ್ಪಾದನೆ ಆರಂಭ ಮಾಡಿ, ಭಾರತದಲ್ಲಿ ಉದ್ಯಮವನ್ನು ಆರಂಭ ಮಾಡಿ. ಸುರಕ್ಷಿತ ಹೂಡಿಕೆಯ ವಾತಾವರಣವನ್ನು ನಾವು ನಿಮಗೆ ನೀಡುತ್ತೇವೆ. ನೀವು ನಿಮ್ಮ ದೇಶದಲ್ಲಿ ಹೂಡಿಕೆ ಮಾಡಿದ್ದಷ್ಟೇ ಸುರಕ್ಷಿತವಾಗಿರಬಹುದು," ಎಂದು ಆಹ್ವಾನಿಸಿದ್ದಾರೆ.
"ಫಾರ್ಮಾ ವಿಭಾಗವು ದೇಶದಲ್ಲಿ ಧರ್ಮವಿದ್ದಂತೆ, ಆದ್ದರಿಂದ ಈ ವಿಭಾಗವು ಅಂತರಾಷ್ಟ್ರೀಯವಾಗಿ ಔಷಧಿಯನ್ನು ಸರಬರಾಜು ಮಾಡುತ್ತಿದೆ. ಇದರಿಂದಾಗಿ ವಿಶ್ವದ ಎಲ್ಲಾ ಕಡೆಗಳಲ್ಲಿ ಕೈಗೆಟ್ಟಕುವ ದರದಲ್ಲಿ ಔಷಧಿಗಳು ಲಭ್ಯವಾಗುತ್ತಿದೆ," ಎಂದು ಕೂಡಾ ಈ ಸಂದರ್ಭದಲ್ಲೇ ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.