ನವದೆಹಲಿ: ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಕಾಂಗ್ರೆಸ್ ಭಾನುವಾರ ಗೌರವ ಸಲ್ಲಿಸಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳು "ದುರ್ಬಲಗೊಳ್ಳುತ್ತಿರುವ" ಸಮಯದಲ್ಲಿ, ವಲ್ಲಭಭಾಯಿ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸುವುದು ಬಹಳ ಮುಖ್ಯವಾಗಿದೆ. ಈ ಸ್ತಂಭಗಳನ್ನು ನಿರ್ಮಿಸಿದ ಕಾಂಗ್ರೆಸ್ ನಾಯಕರಲ್ಲಿ ವಲ್ಲಭಭಾಯಿ ಪಟೇಲ್ ಅವರು ಪ್ರಮುಖ ಧ್ವನಿಯಾಗಿದ್ದರು ಎಂದು ಹೇಳಿದ್ದಾರೆ.
ಈ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೂಡ ಪೇಟಲ್ ಅವರಿಗೆ ಗೌರವ ಸಲ್ಲಿಸಿದ್ದು, ಉಕ್ಕಿನ ಮನುಷ್ಯ" ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಬಾರ್ಡೋಲಿ ಸತ್ಯಾಗ್ರಹದಲ್ಲಿ ರೈತರ ಹಕ್ಕುಗಳು ಮತ್ತು ಸ್ವಾಭಿಮಾನದ ಕುರಿತು ಧ್ವನಿಯನ್ನು ಎತ್ತಿದರು. ಅವರ (ಪಟೇಲರ) ಹೋರಾಟವು ರೈತರ ಮೇಲಿನ ದಬ್ಬಾಳಿಕೆ ವಿರುದ್ಧ ನ್ಯಾಯಕ್ಕಾಗಿ ಮತ್ತು ಅವರ ಹಕ್ಕುಗಳ ಹೋರಾಟದಲ್ಲಿ ಬಂಡೆಯಂತೆ ನಿಲ್ಲಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ, "ಭಾರತವನ್ನು ಒಗ್ಗೂಡಿಸುವ ಈ ಹೋರಾಟದಲ್ಲಿ; ದ್ವೇಷದ ಮೇಲೆ ಪ್ರೀತಿಗೆ ಜಯವನ್ನು ಖಚಿತಪಡಿಸುವ ಈ ಹೋರಾಟದಲ್ಲಿ; ನಮ್ಮ ರೈತರು, ನಮ್ಮ ಜನರು, ನಮ್ಮ ರಾಷ್ಟ್ರವನ್ನು ರಕ್ಷಿಸುವ ಈ ಹೋರಾಟದಲ್ಲಿ ನಾವು ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಅವರನ್ನು ಇಂದು ಮತ್ತು ಎಂದೆಂದು ಸ್ಮರಿಸುತ್ತಲೇ ಇರುತ್ತೇವೆಂದು ಹೇಳಿದ್ದಾರೆ.