ಲಿಮಾ : ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರವಿವಾರ 4 ಚಿನ್ನಕ್ಕೆ ಗುರಿ ಇರಿಸಿದ ಭಾರತ ಅಗ್ರ ಸ್ಥಾನದ ಗೌರವ ಸಂಪಾದಿಸಿದೆ.
10 ಮೀ. ಏರ್ ಪಿಸ್ತೂಲ್ ವಿಭಾಗದ ಮಿಶ್ರ ಸ್ಪರ್ಧೆ, ಪುರುಷರ ಹಾಗೂ ವನಿತೆಯರ ತಂಡ ಸ್ಪರ್ಧೆಯ ಜತೆಗೆ ಪುರುಷರ 10 ಮೀ. ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ಭಾರತ ಬಂಗಾರ ಜಯಿಸಿತು. ಇದರೊಂದಿಗೆ ಭಾರತ 6 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದಂತಾಯಿತು. ಅಮೆರಿಕ ದ್ವಿತೀಯ ಸ್ಥಾನಕ್ಕೆ ಇಳಿಯಿತು. ಅದು 4 ಚಿನ್ನ, 4 ಬೆಳ್ಳಿ ಹಾಗೂ 2 ಕಂಚು ಜಯಿಸಿದೆ.
ಭಾಕರ್‌ಗೆ ಅವಳಿ ಬಂಗಾರ
ರವಿವಾರ ಗೆದ್ದ ಭಾರತದ 4 ಚಿನ್ನಗಳಲ್ಲಿ ಎರಡು ಮನು ಭಾಕರ್ ಅವರಿಂದ ಒಲಿದು ಬಂತು. ಸರಬ್‌ಜೋತ್ ಸಿಂಗ್ ಅವರೊಂದಿಗೆ ಮಿಕ್ಸೆಡ್ ವಿಭಾಗದಲ್ಲಿ ಮೊದಲ ಚಿನ್ನ ಲಭಿಸಿತು. ಬಳಿಕ ರಿತಮ್ ಸಂಗ್ವಾನ್, ಶಿಖಾ ನರ್ವಾಲ್ ಜತೆಗೂಡಿ ವನಿತೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸ್ವರ್ಣ ಸಾಧನೆಗೈದರು. ಈ ಸ್ಪರ್ಧೆಯಲ್ಲಿ ವನಿತಾ ತಂಡ ಬೆಲರೂಸ್ ವಿರುದ್ಧ 16-12 ಅಂತರದ ಮೇಲುಗೈ ಸಾಧಿಸಿತು.
ನವೀನ್, ಸರಬ್‌ಜೋತ್ ಸಿಂಗ್ ಹಾಗೂ ಶಿವ ನರ್ವಾಲ್ ಅವರನ್ನೊಳಗೊಂಡ ಪುರುಷರ ಏರ್ ಪಿಸ್ತೂಲ್ ತಂಡವೂ ಚಿನ್ನ ಗೆದ್ದಿತು. ಭಾರತಕ್ಕೆ ಶರಣಾದ ತಂಡ ಬೆಲರೂಸ್.ಆದರೆ ವನಿತೆಯರ 10 ಮೀ. ಏರ್ ರೈಫಲ್ ಫೈನಲ್‌ನಲ್ಲಿ ಹಂಗೇರಿಗೆ ಶರಣಾಗಿ ಚಿನ್ನವನ್ನು ತಪ್ಪಿಸಿಕೊಂಡಿತು. ನಿಶಾ ಕನ್ವರ್, ಝೀನಾ ಕಿಟ್ಟಾ ಮತ್ತು ಆತ್ಮಿಕಾ ಗುಪ್ತಾ ಈ ತಂಡದಲ್ಲಿದ್ದರು.
10 ಮೀ. ಏರ್ ರೈಫಲ್ ಮಿಶ್ರ ಸ್ಪರ್ಧೆಯಲ್ಲಿ ಆತ್ಮಿಕಾ ಗುಪ್ತಾ ರಾಜ್‌ಪ್ರೀತ್ ಸಿಂಗ್ ಜೋಡಿಗೆ ಬೆಳ್ಳಿ ಪದಕ ಒಲಿಯಿತು.