ಮುಂಬೈ: ಕಾಂಗ್ರೆಸ್ ಪಕ್ಷಕ್ಕೆ ಪೂರ್ಣವಧಿಯ ಅಧ್ಯಕ್ಷರ ಅಗತ್ಯವಿದೆ ಎಂದು ಶಿವಸೇನಾ ಶುಕ್ರವಾರ ಹೇಳಿದೆ. ಪಕ್ಷದಲ್ಲಿನ ನಾಯಕತ್ವದ ಗೊಂದಲ ಪಂಜಾಬಿನಲ್ಲಿ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯಷ್ಟೇ ಜವಾಬ್ದಾರಿಯಾಗಿದೆ ಎಂದು ಸೇನೆ ತಿಳಿಸಿದೆ.
ಕಾಂಗ್ರೆಸ್ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದರೂ ಪಕ್ಷದೊಳಗಿನ ಹಿರಿಯ ಮುಖಂಡರು ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದು, ಪಕ್ಷವನ್ನು ಮುಳುಗಿಸುವ ಗುರಿಯೊಂದಿಗೆ ರಾಹುಲ್ ಹೆಚ್ಚಿನ ಕೆಲಸ ಮಾಡದಂತೆ ತಡೆವೊಡ್ಡುತ್ತಿದ್ದಾರೆ ಎಂದು ಸೇನೆ ಹೇಳಿದೆ.
ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಅವಧಿಯ ಅಧ್ಯಕ್ಷರ ಅಗತ್ಯವಿದೆ. ಮುಖ್ಯಸ್ಥರಿಲ್ಲದ ರಾಜಕೀಯ ಪಕ್ಷಕ್ಕೆ ಏನು ಪ್ರಯೋಜನ? ಕಾಂಗ್ರೆಸ್ ರೋಗಗ್ರಸ್ತವಾಗಿದ್ದು, ಅದಕ್ಕೆ ಚಿಕಿತ್ಸೆ ಬೇಕಾಗಿದೆ. ಆದರೆ, ಚಿಕಿತ್ಸೆ ಸೂಕ್ತವೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಾಮರ್ಶೆಯ ಅಗತ್ಯವಿದೆ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಹಳೆಯ ರಾಜಕೀಯ ಪಕ್ಷ ಅಲುಗಾಡದಂತೆ ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಕೆಲ ಹಿರಿಯ ಮುಖಂಡರು ಹೊಸಬರಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಇವರು ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಮುಳುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಇದೀಗ ಖಚಿತವಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಕಮಾಂಡರ್ ಇಲ್ಲದೇ, ಪಕ್ಷ ಹೇಗೆ ಹೋರಾಡುತ್ತದೆ? ಎಂಬ ಕೆಲ ಹಿರಿಯ ಮುಖಂಡರ ಬೇಡಿಕೆ ತಪ್ಪಲ್ಲ ಎಂದಿದೆ.
ದಲಿತ ಮುಖಂಡರೊಬ್ಬರೊಬ್ಬರನ್ನು ಪಂಜಾಬ್ ಮುಖ್ಯಮಂತ್ರಿಯಾಗಿ ಮಾಡುವುದರೊಂದಿಗೆ ರಾಹುಲ್ ಗಾಂಧಿ ದೃಢ ಹೆಜ್ಜೆ ಇಟ್ಟಿದ್ದಾರೆ. ಆದರೆ, ನವಜೋತ್ ಸಿಂಗ್ ಸಿಧು ರಾಹುಲ್ ಗೆ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಅಲ್ಲಿ ಕಾಂಗ್ರೆಸ್ ನಲ್ಲಿ ಅಂತಹ ನಾಯಕರಿಲ್ಲ, ಸಿಧು ಮೇಲೆ ರಾಹುಲ್ ಗಾಂಧಿ ಹೆಚ್ಚಿನ ನಂಬಿಕೆಯೂ ಇಡಬೇಕಾದ ಅಗತ್ಯವಿಲ್ಲ. ಇಂತಹ ನಾಯಕರಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಕಾಂಗ್ರೆಸ್ ಸಮಸ್ಯೆಯನ್ನು ಹೆಚ್ಚಿಸಿಕೊಂಡಿದೆ ಎಂದು ಸೇನಾ ಹೇಳಿದೆ.
ಪಕ್ಷ ಬಿಡಲು ನಿರ್ಧರಿಸಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಟಿಎಂಸಿ ಸೇರಿರುವ ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫೆಲೆರೊ ವಿರುದ್ಧವೂ ಶಿವಸೇನೆ ಕಿಡಿಕಾರಿದೆ. ಕಾಂಗ್ರೆಸ್ ಅನೇಕ ವರ್ಷಗಳಿಂದ ರಾಷ್ಟ್ರವನ್ನು ಆಳಿದ್ದು, ಈಗಲೂ ಕೆಲ ರಾಜ್ಯಗಳಲ್ಲಿ ಆಡಳಿತದಲ್ಲಿದೆ. ಆದಾಗ್ಯೂ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೊಂದರೆಗೆ ಸಿಲುಕಿರುವುದಾಗಿ ಶಿವಸೇನೆ ಹೇಳಿದೆ.