ನವದೆಹಲಿ: 'ಅಫ್ಗಾನಿಸ್ತಾನ ಸಹಜ ಸ್ಥಿತಿಗೆ ಮರಳಿದ ನಂತರ ಅಫ್ಗನ್ ಮೂಲದ ಉಗ್ರರು ಜಮ್ಮು-ಕಾಶ್ಮೀರದೊಳಗೆ ನುಸುಳಲು ಯತ್ನಿಸುವ ಸಾಧ್ಯತೆಗಳಿವೆ' ಎಂದು ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಶನಿವಾರ ಹೇಳಿದರು.
'ಎರಡು ದಶಕಗಳ ಹಿಂದೆ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ನ ಆಡಳಿತ ಇತ್ತು. ಆಗಲೂ ಇಂಥ ಘಟನೆಗಳು ನಡೆದಿದ್ದವು. ಹೀಗಾಗಿ ಒಳನುಸುಳುವಿಕೆ ಯತ್ನಗಳು ಮತ್ತೆ ಮರುಕಳಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ' ಎಂದರು.
'ಇಂಡಿಯಾ ಟುಡೆ' ನಿಯತಕಾಲಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಇಂಥ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನಾಪಡೆಗಳು ಸನ್ನದ್ಧವಾಗಿವೆ. ಒಳನುಸುಳುವಿಕೆಯನ್ನು ಮಟ್ಟ ಹಾಕುವ ಕಾರ್ಯತಂತ್ರ ಹಾಗೂ ಉಗ್ರರ ಚಟುವಟಿಕೆಗಳ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನು ಭದ್ರತಾಪಡೆಗಳು ಹೊಂದಿವೆ' ಎಂದು ಹೇಳಿದರು.
'ಕಾಶ್ಮೀರದಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆಗಳಿಗೂ, ಅಫ್ಗಾನಿಸ್ತಾನ ತಾಲಿಬಾನಿಗಳ ವಶವಾಗಿರುವುದಕ್ಕೂ ಸಂಬಂಧ ಇದೆಯೇ' ಎಂಬ ಪ್ರಶ್ನೆಗೆ, 'ಈ ಎರಡು ವಿದ್ಯಮಾನಗಳಿಗೆ ಸಂಬಂಧ ಇದೆ ಎಂಬುದಾಗಿ ಹೇಳಲಾಗದು' ಎಂದು ಜನರಲ್ ನರವಣೆ ಉತ್ತರಿಸಿದರು.
'ಪಾಕಿಸ್ತಾನದ ಮೂಲಕ ಅಫ್ಗನ್ ಮೂಲದ ಉಗ್ರರು ಜಮ್ಮು-ಕಾಶ್ಮೀರವನ್ನು ಪ್ರವೇಶಿಸುವ ಸಾಧ್ಯತೆಗಳೂ ಇವೆ. ಇದರಿಂದ ಲಷ್ಕರ್-ಎ-ತಯಬಾ, ಜೈಷ್-ಎ-ಮೊಹಮ್ಮದ್‌ನಂತಹ ಸಂಘಟನೆಗಳಿಂದ ಭಯೋತ್ಪಾದನಾ ಕೃತ್ಯಗಳು ಹೆಚ್ಚಾಗಬಹುದು. ಇದು ನಿಜಕ್ಕೂ ಕಳವಳಕಾರಿ ಹಾಗೂ ಖಂಡನೀಯ' ಎಂದು ಹೇಳಿದರು.