ವಾಷಿಂಗ್ಟನ್: ವಿಶ್ವದ ಹಲವು ದೇಶಗಳ ಗುಪ್ತಚರ ಸಂಸ್ಥೆಗಳ ಕಣ್ಣು ತಪ್ಪಿಸಿ ಚೀನಾ ದೇಶವು ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವ ಹೈಪರ್ಸಾನಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಅತ್ಯಂತ ರಹಸ್ಯವಾಗಿ ಈ ಪ್ರಯೋಗ ನಡೆದಿದ್ದು, ಈ ಕ್ಷಿಪಣಿಯು ಶಬ್ದದ ವೇಗಕ್ಕಿಂತಲೂ 5 ಪಟ್ಟು ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕದ ಹಲವು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಆಗಸ್ಟ್ ತಿಂಗಳಲ್ಲಿ ಈ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆದಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳ ಗುಪ್ತಚರ ಸಂಸ್ಥೆಗಳ ಈ ಬೆಳವಣಿಗೆಯನ್ನು ಅಚ್ಚರಿಯಿಂದ ಗಮನಿಸುತ್ತಿವೆ. ಕ್ಷಿಪಣಿಯ ಸಂಚಾರ ಯಶಸ್ವಿಯಾಗಿದ್ದರೂ ಅದು ಗುರಿಯನ್ನು ಮುಟ್ಟುವಲ್ಲಿ ವಿಫಲವಾಗಿದೆ. ಉದ್ದೇಶಿತ ಗುರಿಯಿಂದ 32 ಮೈಲಿ ದೂರಕ್ಕೆ ಕ್ಷಿಪಣಿಯು ಅಪ್ಪಳಿಸಿತು. ಗುರಿ ತಲುಪವಲ್ಲಿ ವಿಫಲವಾಗಿದ್ದರೂ ಬಾಹ್ಯಾಕಾಶಕ್ಕೂ ಯುದ್ಧ ವಿಸ್ತರಿಸುವ ಸಾಮರ್ಥ್ಯವನ್ನು ಚೀನಾ ಈ ಮೂಲಕ ಪ್ರದರ್ಶಿಸಿರುವುದನ್ನು ತಳ್ಳಿ ಹಾಕುವಂತಿಲ್ಲ.
‘ಹೈಪರ್ಸಾನಿಕ್ ಕ್ಷಿಪಣಿಗಳು ಸಾಂಪ್ರದಾಯಿಕ ಖಂಡಾಂತರ ಕ್ಷಿಪಣಿಗಳಂತೆಯೇ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಶಬ್ದದ ವೇಗಕ್ಕಿಂತಲೂ ಐದುಪಟ್ಟು ವೇಗವಾಗಿ ಗುರಿಯತ್ತ ಮುನ್ನುಗ್ಗಬಲ್ಲದು. ಖಂಡಾಂತರ ಕ್ಷಿಪಣಿಗಳು ಮೊದಲು ನೇರವಾಗಿ ಅಂತರಿಕ್ಷಕ್ಕೆ ಸಾಗಿ, ಅಲ್ಲಿಂದ ನಿರ್ದೇಶಿತ ಗುರಿಯತ್ತ ಇಳಿದು ಬರುತ್ತದೆ. ಆದರೆ ಹೈಪರ್ಸಾನಿಕ್ ಕ್ಷಿಪಣಿಗಳು ಹಾಗಲ್ಲ. ಇವು ಕಡಿಮೆ ಎತ್ತರದಲ್ಲಿ, ಅತ್ಯಂತ ವೇಗವಾಗಿ ಗುರಿಯತ್ತ ಸಾಗಬಲ್ಲವು. ಅಗತ್ಯ ಸಂದರ್ಭಗಳಲ್ಲಿ ಹೈಪರ್ ಸಾನಿಕ್ ಕ್ಷಿಪಣಿಗಳ ವೇಗವನ್ನೂ ನಿಯಂತ್ರಿಸಬಹುದು. ಎತ್ತರ ಮತ್ತು ವೇಗದ ವಿಚಾರದಲ್ಲಿ ನಿಯಂತ್ರಣ ಇರುವುದರಿಂದ ಈ ಕ್ಷಿಪಣಿಗಳಿಂದ ರಕ್ಷಣೆ ಪಡೆಯುವುದು ಕಷ್ಟವಾಗುತ್ತದೆ. ಅಮೆರಿಕ ಕ್ರೂಸ್ ಮತ್ತು ಖಂಡಾಂತರ ಕ್ಷಿಪಣಿಗಳಿಂದ ರಕ್ಷಣೆಗೆ ವ್ಯವಸ್ಥೆ ರೂಪಿಸಿದೆಯಾದರೂ ಹೈಪರ್ಸಾನಿಕ್ ಕ್ಷಿಪಣಿಯಿಂದ ರಕ್ಷಣೆ ಪಡೆದುಕೊಳ್ಳುವ ಪರಿಣಾಮಕಾರಿ ವ್ಯವಸ್ಥೆ ಇನ್ನಷ್ಟೇ ರೂಪುಗೊಳ್ಳಬೇಕಿದೆ’ ಎಂದು ಭಾರತದ ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ ‘ಟಿವಿ9 ಕನ್ನಡ ಡಿಜಿಟಲ್’ಗೆ ಪ್ರತಿಕ್ರಿಯಿಸಿದ್ದಾರೆ.
ಈ ಪರೀಕ್ಷೆಯ ಮಾಹಿತಿ ಹೊಂದಿರುವ ಐದು ಮೂಲಗಳನ್ನು ಉಲ್ಲೇಖಿಸಿರುವ ಫೈನಾನ್ಷಿಯಲ್ ಟೈಮ್ಸ್, ‘ಚೀನಾ ಮಿಲಿಟರಿಯು ಹೈಪರ್ಸಾನಿಕ್ ಗ್ಲೈಡ್ ವಾಹಕದ ಮೂಲಕ ರಾಕೆಟ್ ಉಡಾಯಿಸಿದೆ. ಇದು ಬಾಹ್ಯಾಕಾಶದ ಕೆಳ ಕಕ್ಷೆಯನ್ನು ಮುಟ್ಟಿ, ಅಲ್ಲಿಂದ ಕೆಳಗೆ ಹಾರುವಾಗ ಗುರುತ್ವಾಕರ್ಷಣೆಯ ಬಲದ ಜೊತೆಗೆ ರಾಕೆಟ್ ಇಂಧನವನ್ನೂ ನೂಕುಬಲವಾಗಿ ಬಳಸಿಕೊಂಡು ಗುರಿಯತ್ತ ಮುನ್ನುಗ್ಗಲಿದೆ. ಅತ್ಯಂತ ಕ್ಲಿಷ್ಟವಾದ ಈ ತಂತ್ರಜ್ಞಾನವನ್ನು ಚೀನಾ ಸಾಧಿಸಿರುವುದು ಮತ್ತು ರಕ್ಷಣಾ ಉದ್ಯಮದಲ್ಲಿ ಪ್ರಯೋಗಿಸಿರುವುದು ಅಮೆರಿಕದ ರಕ್ಷಣಾ ವಲಯದಲ್ಲಿ ಸಂಚಲನ ಮೂಡಿಸಿದೆ. ಚೀನಾ ಸಾಧಿಸಿರುವ ಈ ತಂತ್ರಜ್ಞಾನವು ಪ್ರಸ್ತುತ ಅಮೆರಿಕದ ತಂತ್ರಜ್ಞರಿಗೆ ತಿಳಿದಿರುವ ಮತ್ತು ವಿಶ್ವದ ಇತರ ದೇಶಗಳು ಸಾಧಿಸಿರುವ ತಂತ್ರಜ್ಞಾನಕ್ಕಿಂತಲೂ ಸುಧಾರಿತವಾದುದು’ ಎಂದು ಹೇಳಲಾಗಿದೆ.
ಶಬ್ದದ ವೇಗಕ್ಕಿಂತಲೂ ಐದು ಪಟ್ಟು ವೇಗವಾಗಿ ಸಂಚರಿಸುವ ಸಾಮರ್ಥ್ಯವಿರುವ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದವು. ಇವುಗಳ ವೇಗ ಖಂಡಾಂತರ ಕ್ಷಿಪಣಿಗಳಿಗಿಂತಲೂ ಕಡಿಮೆ. ಆದರೆ ಈ ಕ್ಷಿಪಣಿಗಳನ್ನು ಗುರುತಿಸುವುದು, ಬೆನ್ನಟ್ಟುವುದು ಅಥವಾ ಎದುರಿಸಿ ನಾಶಪಡಿಸುವುದು ತುಂಬಾ ಕಷ್ಟ. ಚೀನಾ ದೇಶಕ್ಕೆ ವಿಶ್ವದಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳು ಎನಿಸಿಕೊಂಡಿರುವ ಭಾರತ ಮತ್ತು ಅಮೆರಿಕ ಸರ್ಕಾರಗಳು ಈವರೆಗೆ ಈ ಬೆಳವಣಿಗೆ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಎರಡೂ ಸರ್ಕಾರಗಳಿಗೆ ಚೀನಾದ ಪ್ರಯೋಗದ ಬಗ್ಗೆ ಬಹಳ ಹಿಂದೆಯೇ ಮಾಹಿತಿ ಲಭ್ಯವಾಗಿತ್ತು. ಚೀನಾ ಪ್ರಯೋಗದ ಬಗ್ಗೆ ಭಾರತದ ಕಾರ್ಯತಂತ್ರ ನಿಪುಣ ಸಾಧ್ಯವಿರುವ ಎಲ್ಲ ಮಾಹಿತಿ ಕಲೆಹಾಕಿ ವಿಶ್ಲೇಷಿಸುತ್ತಿದ್ದಾರೆ. ‘ಚೀನಾದ ಹೈಪರ್ಸಾನಿಕ್ ಕ್ಷಿಪಣಿಯ ಬಗ್ಗೆ ಆತಂಕ ಪಡುವುದು ಅನಗತ್ಯ’ ಎಂದು ಹೆಸರು ಹೇಳಲು ಇಚ್ಛಿಸದ ಭಾರತದ ರಕ್ಷಣಾ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
‘ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ನಿರಂತರ ಪ್ರಕ್ರಿಯೆ. ಸಬ್ಸಾನಿಕ್, ಸೂಪರ್ಸಾನಿಕ್ ಮತ್ತು ಹೈಪರ್ಸಾನಿಕ್ ವೇಗದ ಕ್ಷಿಪಣಿಗಳ ಅಭಿವೃದ್ಧಿ ಕಾರ್ಯ ನಿರಂತರವಾಗಿ ಸಾಗುತ್ತಿರುತ್ತದೆ. ಚೇನಾ ಒಂದು ಕ್ಷಿಪಣಿಯನ್ನು ಇದೀಗ ಪರೀಕ್ಷಾರ್ಥ ಉಡಾವಣೆ ಮಾಡಿದೆ ಎಂದರೆ ಅದು ಏಕಾಏಕಿ ಆಗಿರುವ ಬೆಳವಣಿಗೆ ಖಂಡಿತ ಅಲ್ಲ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಇಂಥ ಹೈಪರ್ಸಾನಿಕ್ ಕ್ಷಿಪಣಿಗಳಿವೆ. ಇದರ ಬಗ್ಗೆ ಅಷ್ಟೊಂದು ಕಾಳಜಿ ಮಾಡುವ ಅಗತ್ಯವಿಲ್ಲ. ಮೊದಲು ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು, ನಂತರ ಪ್ರಯೋಗದಲ್ಲಿ ಅದರ ಸಾಮರ್ಥ್ಯ ನಿರೂಪಿತವಾಗಬೇಕು, ಇಷ್ಟಾದ ನಂತರ ಅದು ಮಿಲಿಟರಿ ಉದ್ದೇಶದ ಬಳಕೆಗೆ ಸೇರ್ಪಡೆಯಾಗಬೇಕು. ಹೈಪರ್ಸಾನಿಕ್ ಕ್ಷಿಪಣಿಗಳು ಸಾಗುವ ವೇಗ ಅತ್ಯಂತ ಕ್ಷಿಪ್ರವಾದುದು. ಹಾರಾಡುವಾಗ ಅದರ ಗುರಿ ಬದಲಿಸುವುದು ಅಷ್ಟು ಸುಲಭವಲ್ಲ. ಅದು ಎಂಥ ಸಿಡಿತಲೆ ಕೊಂಡೊಯ್ಯಬಲ್ಲದು ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು’ ಎಂದು ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣೆ (Institute for Defence Studies and Analysis) ಸಂಸ್ಥೆಯ ಮಾಜಿ ಸಮಾಲೋಚಕ ಜಿ.ಬಾಲಚಂದ್ರನ್ ಇಂಡಿಯನ್ ಎಕ್ಸ್ಪ್ರೆಸ್ ಜಾಲತಾಣಕ್ಕೆ ಪ್ರತಿಕ್ರಿಯಿಸಿದ್ದಾರೆ.
ಈ ಕ್ಷಿಪಣಿಯ ದಕ್ಷಿಣ ಧ್ರುವದವರೆಗೂ ಹಾರಬಲ್ಲದು ಎಂದು ಚೀನಾ ಮೂಲಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಟೈಮ್ಸ್ ಹೇಳಿದೆ. ಅಮೆರಿಕ ಸೇನೆಯು ಅಭಿವೃದ್ಧಿಪಡಿಸಿ, ಅಳವಡಿಸಿಕೊಂಡಿರುವ ಕ್ಷಿಪಣಿ ನಿರೋಧಕ ವ್ಯವಸ್ಥೆಯು ಉತ್ತರ ಧ್ರುವದ ಮಾರ್ಗವನ್ನು ಮಾತ್ರವೇ ಗಮನದಲ್ಲಿರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚೀನಾ ಸೇನೆ ನಿರೂಪಿಸಿರುವ ಹೊಸ ಸಾಮರ್ಥ್ಯವು ಗೇಮ್ ಚೇಂಜರ್ ಆಗಬಲ್ಲದು ಎಂದು ಹೇಳಲಾಗುತ್ತಿದೆ. ತೈವಾನ್ ವಿಚಾರದಲ್ಲಿ ಅಮೆರಿಕದೊಂದಿಗೆ, ಗಡಿ ವಿವಾದ ವಿಚಾರವಾಗಿ ಭಾರತದೊಂದಿಗೆ ಚೀನಾ ಸಂಬಂಧ ಹದಗೆಟ್ಟಿದ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚೀನಾದ ಹೈಪರ್ಸಾನಿಕ್ ರಾಕೆಟ್ ಪ್ರಯೋಗವನ್ನು ವಿಶ್ವ ಹಲವು ಆಯಾಮಗಳಲ್ಲಿ ವಿಶ್ಲೇಷಿಸುತ್ತಿದೆ.
ಚೀನಾ ಸರ್ಕಾರವು ಸಹ ಹೈಪರ್ಸಾನಿಕ್ ರಾಕೆಟ್ ಪ್ರಯೋಗದ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ‘ನಮ್ಮ ಸೇನೆಯು ರಕ್ಷಣೆಯ ನೀತಿ ಹೊಂದಿದೆ. ದಾಳಿ ನಡೆಸುವುದು ಅಥವಾ ಯಾವುದೇ ದೇಶವನ್ನು ಗುರಿಯಾಗಿಸಿ ನಾವು ಯಾವುದೇ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಲ್ಲ’ ಎಂದು ಅಮೆರಿಕದಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು ಪ್ರತಿಕ್ರಿಯಿಸಿದ್ದಾರೆ. ‘ಯುದ್ಧಾಸ್ತ್ರಗಳ ವಿಚಾರದಲ್ಲಿ ನಾವು ಯಾವುದೇ ದೇಶದೊಂದಿಗೆ ಪೈಪೋಟಿ ನಡೆಸುತ್ತಿಲ್ಲ. ಚೀನಾದಿಂದ ಆತಂಕವಿದೆ ಎಂದು ಅಮೆರಿಕ ಹೈಪರ್ಸಾನಿಕ್ ಶಸ್ತ್ರಗಳನ್ನೂ ಸೇರಿದಂತೆ ಹಲವು ಮಿಲಿಟರಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ರೂಪಿಸಿದೆ. ಇದು ಸಹಜವಾಗಿಯೇ ವಿಶ್ವದಲ್ಲಿ ಶಸ್ತ್ರಾಸ್ತ್ರ ಪೈಪೋಟಿಗೂ ಕಾರಣವಾಗಿದೆ’ ಎಂದು ಅವರು ಹೇಳಿದ್ದಾರೆ.