ಮಂಗಳೂರು: ಕರಾವಳಿ ಭಾಗದ ಜಾನಪದೀಯ ಕ್ರೀಡೆ ಕಂಬಳ ಮತ್ತೊಂದು ಮೈಲಿಗಲ್ಲಿನತ್ತ ಹೆಜ್ಜೆ ಇಟ್ಟಿದೆ. ಕಂಬಳ ಇತಿಹಾಸದಲ್ಲೇ ಮೊದಲ ಬಾರಿಗೆ ಕೋಣಗಳನ್ನು ಹೆಣ್ಣು ಮಕ್ಕಳು ಓಡಿಸುವ ಮೂಲಕ ಇತಿಹಾಸ ಬರೆಯಲಿದ್ದಾರೆ.
ಕಂಬಳದ ಕೋಣಗಳನ್ನು ಓಡಿಸಲು ಐವರು ಹೆಣ್ಣುಮಕ್ಕಳು ಮುಂದೆ ಬಂದಿದ್ದು, ಈ ಬಾರಿಯ ಕಂಬಳ ಋತುವಿನಲ್ಲಿ ಕಂಬಳದ ಕೋಣಗಳನ್ನು ಓಡಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಯಾವ ಕೋಣಗಳನ್ನು ಓಡಿಸಬೇಕು? ಹೇಗೆ ಓಡಿಸಬೇಕೆಂದು ಕಂಬಳ ಅಕಾಡೆಮಿ ನಿರ್ಧಾರ ಮಾಡಲಿದೆ.
ಈ ಬಗ್ಗೆ ಮೂಡಬಿದಿರೆಯಲ್ಲಿ ಕಂಬಳ ಆಕಾಡೆಮಿ ವತಿಯಿಂದ ನಡೆಯುವ ಉಚಿತ ತರಬೇತಿ ಶಿಬಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂಬಳ ಅಕಾಡಮಿ ಅಧ್ಯಕ್ಷ ಗುಣಪಾಲ ಕಡಂಬ, "ಈ ಬಾರಿ ಹೆಣ್ಣುಮಕ್ಕಳಿಗೂ ಕಂಬಳದಲ್ಲಿ ಪ್ರಾತಿನಿಧ್ಯ ನೀಡಲು ತೀರ್ಮಾನ ಮಾಡಿದ್ದೇವೆ. ಈಗಾಗಲೇ ಐವರು ಕಂಬಳ ಕೋಣದ ಯಜಮಾನ ಕುಟುಂಬದವರು ಮುಂದೆ ಬಂದಿದ್ದು, ತಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಕೋಣಗಳನ್ನು ಓಡಿಸಲು ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ. ಈ ಹೆಣ್ಣು ಮಕ್ಕಳಿಗೆ ಅಕಾಡೆಮಿ ವತಿಯಿಂದ ತರಬೇತಿ ನೀಡಲಾಗುವುದು. ಈ ವರ್ಷದ ಕಂಬಳ ಕೂಟದಲ್ಲೇ ಅವಕಾಶ ನೀಡಲಾಗುವುದು," ಎಂದು ಹೇಳಿದ್ದಾರೆ.
15 ದಿನಗಳ ಉಚಿತ ಕಂಬಳ ತರಬೇತಿ
"ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಮನೆಯಲ್ಲಿ ಕೋಣಗಳನ್ನು ಮಹಿಳೆಯರೇ ನೋಡಿಕೊಳ್ಳುತ್ತಾರೆ. ಹೀಗಾಗಿ ಕಂಬಳ ಕೋಣಗಳನ್ನು ಮಹಿಳೆಯರೇ ಗದ್ದೆಗಿಳಿಸಬಹುದು. ಕಂಬಳ ಸಾಂಪ್ರದಾಯಿಕವಾಗಿ ಬಹಳ ಮಹತ್ವ ಹೊಂದಿರುವುದರಿಂದ, ಸಂಪ್ರದಾಯದ ಪ್ರಕಾರವೇ ಮಹಿಳೆಯರಿಗೆ ಅವಕಾಶ ನೀಡುತ್ತೇವೆ," ಎಂದು ಗುಣಪಾಲ ಕಡಂಬ ತಿಳಿಸಿದ್ದಾರೆ.
ಮೂಡಬಿದಿರೆಯಲ್ಲಿ ಸದ್ಯ 15 ದಿನಗಳ ಉಚಿತ ಕಂಬಳ ತರಬೇತಿ ನಡೆಯುತ್ತಿದೆ. ಕಳೆದ ಆರು ವರ್ಷಗಳಿಂದ ತರಬೇತಿ ನಡೆಯುತ್ತಿದ್ದು, ಈವರೆಗೆ ಒಟ್ಟು 160 ಮಂದಿ ಕಂಬಳ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಅದರಲ್ಲಿ 60 ಮಂದಿ ಸಕ್ರಿಯವಾಗಿ ಕಂಬಳದಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟು 7 ಮಂದಿ ಕಂಬಳ ಓಟಗಾರರಿಗೆ ಕ್ರೀಡಾರತ್ನ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ಕಂಬಳ ಕೂಟದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಮತ್ತು ಪಣಪಿಲ ಪ್ರವೀಣ್ ಕೋಟ್ಯಾನ್ ಕೂಡಾ ಕಂಬಳ ಅಕಾಡೆಮಿಯ ತರಬೇತಿಯಿಂದಲೇ ಕಂಬಳದಲ್ಲಿ ತೊಡಗಿಸಿಕೊಂಡವರು ಅನ್ನುವುದು ಗಮನಾರ್ಹವಾಗಿದೆ.
18 ರಿಂದ 25 ವರ್ಷ ಒಳಗಿನ ಯುವಕರನ್ನು ಮಾತ್ರ ಆಯ್ಕೆ
ಈ ಬಾರಿಯ ಕಂಬಳ ತರಬೇತಿಗಾಗಿ ಒಟ್ಟು 219 ಮಂದಿ ಅರ್ಜಿ ಸಲ್ಲಿಸಿದ್ದರು, ಆದರೆ ಅಳೆದು ತೂಗಿ 33 ಮಂದಿಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಬಹುತೇಕರು ಪದವೀಧರರೇ ಆಗಿದ್ದು, ಕೃಷಿ ಹಿನ್ನಲೆಯಿದ್ದವರಿಗೆ ಅವಕಾಶ ನೀಡಲಾಗಿದೆ. 18 ರಿಂದ 25 ವರ್ಷಗಳ ಒಳಗಿನ ಯುವಕರನ್ನು ಮಾತ್ರ ಆಯ್ಕೆ ಮಾಡಲಾಗಿದ್ದು, ದೈಹಿಕ ಆರೋಗ್ಯ ಪರೀಕ್ಷೆ ಮಾಡಿದ ಬಳಿಕವಷ್ಟೇ ಆಯ್ಕೆ ಮಾಡಲಾಗಿದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಯುವಕರು ಭಾಗವಹಿಸಿದ್ದಾರೆ.
15 ದಿನಗಳ ಕಾಲ 33 ಮಂದಿ ಶಿಬಿರಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಮುಂಜಾನೆ 5 ಗಂಟೆಗೆ ಆರಂಭವಾಗುವ ಶಿಬಿರ ರಾತ್ರಿ 8.30ರವರೆಗೂ ವಿವಿಧ ಚಟುವಟಿಕೆಗಳ ಮೂಲಕ ನಡೆಯುತ್ತದೆ. ಯೋಗ, ವ್ಯಾಯಾಮ, ಕೋಣ ಪಳಗಿಸುವ ವಿಧಾನ, ಕೋಣಗಳಿಗೆ ನೇಗಿಲು ಕಟ್ಟುವ ರೀತಿ, ಕೋಣಗಳಿಗೆ ಸ್ನಾನ, ಕೋಣಗಳಿಗೆ ಆಹಾರ ಸಿದ್ಧಪಡಿಸುವಿಕೆ, ಕೋಣಗಳಿಗೆ ಮಸಾಜ್ ಸೇರಿದಂತೆ ಹಲವು ತರಬೇತಿಗಳನ್ನು ನೀಡಲಾಗಿದೆ. ಭವಿಷ್ಯದಲ್ಲಿ ಕಂಬಳ ಕೋಣದ ಓಟಗಾರರಾಗಬೇಕೆಂಬ ಕನಸಿದ್ದವರಿಗೂ ಅಕಾಡೆಮಿ ತರಬೇತಿ ನೀಡುತ್ತಿದೆ.
ಶಿಬಿರಾರ್ಥಿಗಳಿಗೆ ಮೊಬೈಲ್ ಬಳಕೆ ನಿಷಿದ್ಧ
ಈ ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಮೊಬೈಲ್ ಬಳಕೆ ನಿಷಿದ್ಧವಾಗಿದ್ದು, ದಿನದಲ್ಲಿ ಕೆಲ ನಿಮಿಷಗಳ ಕಾಲ ಮಾತ್ರ ಮೊಬೈಲ್ ನೀಡಲಾಗುತ್ತಿದೆ. ಶಿಸ್ತು, ಆಹಾರ ಕ್ರಮ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದೇ ತರಬೇತಿಯ ಉದ್ದೇಶವಾಗಿದೆ. ತರಬೇತಿಗಾಗಿ ಸುಮಾರು ಏಳು ಲಕ್ಷ ರೂಪಾಯಿಯನ್ನು ಅಕಾಡೆಮಿ ಭರಿಸಲಿದೆ.
ತರಬೇತಿ ಪಡೆದ ಶಿಬಿರಾರ್ಥಿಗಳ ಕ್ಷಮತೆ ಪರೀಕ್ಷಿಸುವ ನಿಟ್ಟಿನಲ್ಲಿ ಅಕ್ಟೋಬರ್ 10ರಂದು ಪ್ರಾಯೋಗಿಕ ಮಿನಿ ಕಂಬಳವನ್ನು ಮೂಡಬಿದಿರೆಯಲ್ಲಿ ನಡೆಸಲು ಅಕಾಡೆಮಿ ನಿರ್ಧಾರ ಮಾಡಿದೆ. ಈ ವೇಳೆ ಶಿಬಿರಾರ್ಥಿಗಳೇ ಕೋಣ ಓಡಿಸಲಿದ್ದು, ಸುಮಾರು 40 ಜತೆ ಕೋಣಗಳು ಈ ಮಿನಿ ಕಂಬಳದಲ್ಲಿ ಭಾಗವಹಿಸಲಿವೆ.
ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಕಂಬಳ
ತರಬೇತಿ ವೇಳೆ ಶಿಬಿರಾರ್ಥಿಗಳನ್ನು ಸಿಂಥೆಟಿಕ್ ಟ್ರ್ಯಾಕ್‌ನಲ್ಲೂ ಓಡಿಸಲಾಗಿದೆ. ಬರೀಗಾಲಿನಲ್ಲಿ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಓಡಿದ ಶಿಬಿರಾರ್ಥಿಗಳು, ಸಿಂಥೆಟಿಕ್‌ನಲ್ಲೂ ಕಮಾಲ್ ಮಾಡಬಹುದು ಎಂದು ನಿರೂಪಿಸಿದ್ದಾರೆ.
ಒಟ್ಟಿನಲ್ಲಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಕಂಬಳದಲ್ಲಿ ಭಾಗವಹಿಸಲು ಕರಾವಳಿಯ ಯುವಕರು ಮುಂದೆ ಬಂದಿದ್ದಾರೆ. ಕಂಬಳವನ್ನು ಉಳಿಸಿ ಬೆಳೆಸುವಂತಹ ನಿಟ್ಟಿನಲ್ಲಿ ಅಕಾಡೆಮಿಯ ಈ ಕಾರ್ಯ ಮೆಚ್ಚುವಂತಹದ್ದಾಗಿದೆ.