ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ಹತ್ಯೆಗಳು ನಡೆಯುತ್ತಿದೆ. ಈ ಹಿನ್ನೆಲೆ ಮಾತನಾಡಿರುವ ಹಿರಿಯ ಸೇನಾ ಅಧಿಕಾರಿಯೊಬ್ಬರು, "ಕಾಶ್ಮೀರದ ಕೆಲವು ಭಾಗದಲ್ಲಿ ನಡೆಯುವ ಈ ಹತ್ಯೆಯನ್ನು ತಡೆಯಲು ಹಾಗೂ ನಾಗರಿಕರ ಹತ್ಯೆಯನ್ನು ನಾವು ಖಂಡಿಸುವ ಸಮಯ ಈಗ ಬಂದಿದೆ. ಇದರಿಂದಾಗಿ ನಮ್ಮ ಭವಿಷ್ಯದ ಪೀಳಿಗೆಯನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ," ಎಂದು ಹೇಳಿದ್ದಾರೆ.
ಗೋಷ್ಠಿಯೊಂದರಲ್ಲಿ ಮಾತನಾಡಿದ ಡೈರೆಕ್ಟರ್ ಜನರಲ್ ಆಫ್ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ ಹಾಗೂ ಸಮಗ್ರ ರಕ್ಷಣಾ ಸಿಬ್ಬಂದಿಯ ಉಪ ಮುಖ್ಯಸ್ಥರು ಆಗಿರುವ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ದಿಲೋನ್, "ಮುಗ್ಧ ನಾಗರಿಕರ ಮೇಲೆ ಹೀಗೆ ದಾಳಿ ನಡೆಸುವವರು ಸಮಾಜದ ಮೇಲೆ ದಾಳಿ ಮಾಡಿದ್ದಂತೆ ಹಾಗೂ ಅವರು ಎಂದಿಗೂ ಕಾಶ್ಮೀರದ ಸ್ನೇಹಿತರಾಗಿರುವುದಿಲ್ಲ," ಎಂದರು.
"ಕಳೆದ ಮೂರು ದಶಕಗಳಿಂದ ಕಾಶ್ಮೀರದ ಜನರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ. ಕಾಶ್ಮೀರದ ಪ್ರತಿ ಬೇರು, ಮೂಲಗಳು ಕೂಡಾ ಹಲವಾರು ದಶಕಗಳಿಂದ ಸಂಕಷ್ಟವನ್ನು ಅನುಭವಿಸುತ್ತಿದೆ. ನಮಗೆ ನಮ್ಮದೇ ಆದ ಭಾವನೆಯನ್ನು ಹೊಂದಿರುವ ಸ್ವಾತಂತ್ಯ್ರವಿದೆ. ಆದರೆ ಕಾಶ್ಮೀರದಲ್ಲಿ ಈ ರೀತಿಯಾಗಿ ನಾಗರಿಕರ ಹತ್ಯೆ ನಡೆಯುವಾಗ ಮಾನಸಿಕವಾಗಿ ಭಾರೀ ಆಘಾತ ಉಂಟಾಗುತ್ತದೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಕಾಶ್ಮೀರದಲ್ಲಿ ಈ ರೀತಿಯಾಗಿ ನಾಗರಿಕರ ಹತ್ಯೆ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾರೂ ಕೂಡಾ ಮಾತನಾಡುವವರು ಇಲ್ಲ. ಮಹಿಳೆಯರಾಗಲಿ ಪುರುಷರು ಆಗಲಿ ಬೇರೆ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಲು ಪೂರ್ಣ ಸ್ವಾತಂತ್ಯ್ರವನ್ನು ಹೊಂದಿದ್ದಾರೆ. ಆದರೆ ಈ ಬಗ್ಗೆ ಮಾತನಾಡುವವರು ಯಾರೂ ಇಲ್ಲ. ಮುಂದೆ ಭವಿಷ್ಯದಲ್ಲಿ ವಿಶ್ವವೇ ನಿಮ್ಮ ಬಳಿ ಪ್ರಶ್ನೆ ಕೇಳುತ್ತದೆ. ಈ ರೀತಿ ಮುಗ್ಧರ ಹತ್ಯೆ ನಡೆಯುತ್ತಿದ್ದ ಸಂದರ್ಭದಲ್ಲಿ ನೀವು ಏನು ಮಾಡಿದಿರಿ ಎಂದು ಕೇಳುತ್ತದೆ," ಎಂದು ಹೇಳಿರುವ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ದಿಲೋನ್, "ಆಯ್ದ ಮಾನಸಿಕ ವ್ಯಾಧಿಯಿಂದ ಜನರು ಹೊರಗೆ ಬರಬೇಕು," ಎಂದಿದ್ದಾರೆ.
"ಬಂದೂಕು ಸಂಸ್ಕೃತಿ ನಡುವೆ ಬೆಳೆದ ಮಕ್ಕಳ ಮನಸ್ಥಿತಿ"
"2011 ರ ಜನಗಣತಿಯ ಪ್ರಕಾರ 32 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾಶ್ಮೀರದ ಜನಸಂಖ್ಯೆಯು 62 ಪ್ರತಿಶತದಷ್ಟು ಇದೆ. ಅಂದರೆ ಈ ಮೂರು ದಶಕಗಳಲ್ಲಿ 66 ಶೇಕಡಾ ಜನಸಂಖ್ಯೆ ಜನಿಸಿದೆ. ಇವರನ್ನು ಸಂಘರ್ಷದ ಮಕ್ಕಳು ಎಂದೇ ನಾವು ಹೇಳಬಹುದು. ಈ ಮಕ್ಕಳು ಬಂದೂಕು ಸಂಸ್ಕೃತಿ, ಮುಷ್ಕರ, ಕರ್ಫ್ಯೂ ಮತ್ತು ದಮನದ ಸಮಯದಲ್ಲಿ ಹುಟ್ಟಿ ಬೆಳೆದವರು. ಈ ಮಕ್ಕಳ ಮನಸ್ಸಿಗೆ ಹುಟ್ಟಿನಿಂದಲೇ ಆಘಾತ ಉಂಟಾಗಿದೆ. ಆದ್ದರಿಂದ ಕಾಶ್ಮೀರದಲ್ಲಿ ಬಹಳಷ್ಟು ಸಮಸ್ಯೆಗಳು ಇದೆ. ನಾವು ಅಲ್ಲಿನ ಜನರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು," ಎಂದು ಅಭಿಪ್ರಾಯಿಸಿದ್ದಾರೆ.
"ನಾವು ಈ ಸಂದರ್ಭದಲ್ಲಿ ಯಾರನ್ನು ದೂರುವುದು? ಈ ನಡುವೆ ಸೋಲುವುದು ಕಾಶ್ಮೀರಿ ಪತ್ನಿಯನ್ನು, ಕಾಶ್ಮೀರಿ ತಾಯಿಯರು. ಕಾಶ್ಮೀರಿ ತಾಯಿಯರು ಏಕೆಂದರೆ ಆಕೆಯ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡಲು ಸಾಧ್ಯವಾಗಿಲ್ಲ. ಮಕ್ಕಳನ್ನು ಮದ್ರಾಸಕ್ಕೆ ತಳ್ಳಳಾಗಿದೆ. ಅಲ್ಲಿ ಬೋಧನೆ ಮಾಡಲಾಗಿದೆ. ಅಲ್ಲಿಂದ ಕೆಲವು ಮಕ್ಕಳು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಕೊಂಡಿದ್ದಾರೆ. ಕೆಲವು ವರ್ಷಗಳಲ್ಲೇ ತನ್ನ ಜೀವನವನ್ನೇ ಕಳೆದುಕೊಂಡಿದ್ದಾರೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಹಲವಾರು ದಿನಗಳಿಂದ ನಾಗರಿಕರ ಹತ್ಯೆ ಮಾಡಲಾಗುತ್ತಿದೆ. ಮುಖ್ಯವಾಗಿ ಬೇರೆ ರಾಜ್ಯಗಳಿಂದ ಆಗಮಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬೀಡು ಬಿಟ್ಟಿರುವ ಅಥವಾ ಕೆಲಸ ಮಾಡುತ್ತಿರುವ ಜನರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ಈವರೆಗೆ 11 ಮಂದಿ ಕಾರ್ಮಿಕರ ಸಾವು ಸಂಭವಿಸಿದೆ. ಈ ಎಲ್ಲಾ ಬೆಳವಣಿಗೆಯ ಹಿನ್ನಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಬೇರೆ ರಾಜ್ಯಗಳ ಕಾರ್ಮಿಕರು ಜಮ್ಮು ಮತ್ತು ಕಾಶ್ಮೀರವನ್ನು ತೊರೆದು ಮತ್ತೆ ತಮ್ಮ ತವರು ರಾಜ್ಯಕ್ಕೆ ತೆರಳುತ್ತಿದ್ದಾರೆ. ಬಿಹಾರದ ಕಾರ್ಮಿಕ ಮೊಹಮ್ಮದ್ ಸಲಾಮ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಾನು ಇಂತಹ ಸ್ಥಿತಿಯನ್ನು ಎಂದೂ ಕೂಡಾ ನೋಡಿಲ್ಲ ಎಂದು ಹೇಳಿದ್ದಾರೆ. "ನಾವು ಎಂದೂ ಕೂಡಾ ಇಂತಹ ಸಂದರ್ಭವನ್ನು ಎದುರು ನೋಡಿಲ್ಲ. ಕಳೆದ ರಾತ್ರಿ ಪೊಲೀಸರು ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆ ತಂದಿದ್ದಾರೆ. ನಾವು ಈಗ ಮಾಡುವುದಾದರೂ ಏನು? ನಾವು ಇಲ್ಲಿಗೆ ಕೆಲಸಕ್ಕೆಂದು ಬಂದವರು," ಎಂದು ದಿಕ್ಕುದೋಚದೆ ನುಡಿದಿದ್ದಾರೆ.