ನವದೆಹಲಿ: 'ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿ ಜಾರಿಗೆ ವಿರೋಧಪಕ್ಷಗಳು ಅಡ್ಡಪಡಿಸುತ್ತಿವೆ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದ್ದಾರೆ. ಪಕ್ಷದ ಸದಸ್ಯರು ರಾಜಕೀಯ ದೃಷ್ಟಿಯಿಂದಲ್ಲ, ಸಾಮಾಜಿಕ ದೃಷ್ಟಿ ಗಮನದಲ್ಲಿ ಇಟ್ಟುಕೊಂಡು ದೇಶಕ್ಕಾಗಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಜನಕಲ್ಯಾಣ ಯೋಜನೆಗಳು, ಕೋವಿಡ್ ಸಂಕಷ್ಟದಲ್ಲಿ ನೀಡಿದ ಉಚಿತ ಪಡಿತರ ಕಾರ್ಯಕ್ರಮಗಳು ರಾಜಕೀಯದ ವ್ಯಾಖ್ಯಾನವನ್ನೇ ಬದಲಿಸಿವೆ ಎಂದು ತಿಳಿಸಿದರು.
ಕಾರ್ಯಕಾರಿಣಿ ಸಭೆ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಛತ್ತೀಸಗಡದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು, ಪಕ್ಷದ ಮಂದಿನ ಕೆಲವು ತಿಂಗಳ ಕಾರ್ಯಸೂಚಿಯನ್ನು ಸಭೆಯಲ್ಲಿ ಅಂತಿಮಗೊಳಿಸಲಾಯಿತು ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಸಾಂಸ್ಥಿಕ ಸಂಘಟನೆಗಳ ಮುಖಂಡರ ಜೊತೆಗೆ ವಿಸ್ತೃತ ಚರ್ಚೆ ನಡೆಸಿರುವ ಮಧ್ಯೆಯೇ ಈ ಸಭೆಯು ನಡೆದಿದೆ.
ಸದಸ್ಯರು ಹೇಗೆ ಪಕ್ಷಕ್ಕೆ ದುಡಿಯುವುದರ ಜೊತೆಗೆ ಸಮಾಜಮುಖಿಯಾಗಿಯೂ ಹೇಗೆ ಇರಬಹುದು ಎಂಬುದನ್ನು ಬಿಜೆಪಿ ತೋರಿಸಿದೆ. ಸಾಮಾಜಿಕ ದೃಷ್ಟಿಗೆ ಅನುಗುಣವಾಗಿ ಬಿಜೆಪಿ ಸದಸ್ಯರು ದೇಶಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.