ನವದೆಹಲಿ: ಭಾರತದ ಸರ್ಕಾರಿ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸಿರುವ ಬಗ್ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಪ್ರತಿಕ್ರಿಯೆ ನೀಡಿದ್ದು, ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದೆ.
ಏರ್ ಇಂಡಿಯಾದ ಮಾರಾಟ ಭಾರತದ ಖಾಸಗೀಕರಣದ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಐಎಂಎಫ್-ಎಸ್ ಟಿಐ ಪ್ರಾದೇಶಿಕ ತರಬೇತಿ ಇನ್ಸ್ಟಿಟ್ಯೂಟ್ ಹಾಗೂ ಐಎಂಎಫ್ ನ ಭಾರತ ಮಿಷನ್ ನ ಮಾಜಿ ಮುಖ್ಯಸ್ಥ ಅಲ್ಫರ್ಡ್ ಶಿಪ್ಕೆ ಹೇಳಿದ್ದಾರೆ. ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಖರೀದಿಸಿದ್ದು ಅ.11 ರಂದು ಲೆಟರ್ ಆಫ್ ಇಂಟೆಂಟ್ ನ್ನು ಹಸ್ತಾಂತರಿಸಲಾಗಿದೆ.
"ಏರ್ ಇಂಡಿಯಾವನ್ನು ಮಾರಾಟ ಮಾಡುವ ಇತ್ತೀಚಿನ ಭಾರತದ ನಡೆಯನ್ನು ನಾವು ಸ್ವಾಗತಿಸುತ್ತೇವೆ, ಇದು ಪ್ರಮುಖ ಮೈಲಿಗಲ್ಲಾಗಿದೆ" ಎಂದು ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಅಲ್ಫರ್ಡ್ ಶಿಪ್ಕೆ ಅಭಿಪ್ರಾಯಪಟ್ಟಿದ್ದಾರೆ.
15,300 ಕೋಟಿ ರೂಪಾಯಿ ಸಾಲದ ಹೊರೆಯೊಂದಿಗೆ 2,700 ಕೋಟಿ ರೂಪಾಯಿ ಹಣ ನೀಡಿ ಟಾಟಾ ಹರಾಜು ಪ್ರಕ್ರಿಯೆಯಲ್ಲಿ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿತ್ತು.
ಸಾಮಾನ್ಯವಾಗಿ ಖಾಸಗೀಕರಣದ ಫಲವವನ್ನು ಹೆಚ್ಚಿಸುವುದಕ್ಕೆ ಅಂತಾರಾಷ್ಟ್ರೀಯ ಅನುಭವದಲ್ಲಿ ಮಧ್ಯಮ ಅವಧಿಯ ಖಾಸಗೀಕರಣ ಯೋಜನೆಗಳನ್ನು, ಘನ ನಿಯಂತ್ರಕ ಚೌಕಟ್ಟುಗಳು, ಸ್ಪರ್ಧಾತ್ಮಕ ಮಾರುಕಟ್ಟೆಗಳು ಮತ್ತು ಪ್ರಮುಖ ಪಾಲುದಾರರ ಖರೀದಿಗಳನ್ನು ಹೈಲೈಟ್ ಮಾಡಲಾಗುತ್ತದೆ ಎಂದು ಶಿಪ್ಕೆ ಹೇಳಿದ್ದಾರೆ.