ಠಾಣೆ, ಮಹಾರಾಷ್ಟ್ರ: ಪಾಲ್ಘರ್ ಜಿಲ್ಲೆಯ ವಾಡಾ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುವ 'ಕೋಲಂ ಅಕ್ಕಿ'ಗೆ 'ಭೌಗೋಳಿಕ ಸೂಚಿ' (ಜಿಐ ಟ್ಯಾಗ್) ಮಾನ್ಯತೆ ಲಭಿಸಿದೆ.
ಇದು 'ವಾಡಾ ಕೋಲಂ ಅಕ್ಕಿ' ಎಂದೇ ಪ್ರಸಿದ್ಧ. ಈ ವಿಧದ ಅಕ್ಕಿಯನ್ನು 'ಝಿನಿ' ಅಥವಾ 'ಜ್ಹಿನಿ ಅಕ್ಕಿ' ಎಂದೂ ಕರೆಯಲಾಗುತ್ತದೆ.
'ಜಿಐ ಟ್ಯಾಗ್ ಲಭಿಸಿರುವುದರಿಂದ ವಾಡಾ ಅಕ್ಕಿಗೆ ವಿಶಿಷ್ಟ ಗುರುತು ಸಿಗುವುದಲ್ಲದೇ, ಬೃಹತ್ ಮಾರುಕಟ್ಟೆ ಕೂಡ ಲಭಿಸುವುದು' ಎಂದು ಕೃಷಿ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಅಂಕುಶ್ ಮಾನೆ ಭಾನುವಾರ ತಿಳಿಸಿದ್ದಾರೆ.
'ಈ ವಿಶಿಷ್ಟ ತಳಿ ಅಕ್ಕಿಯ ಒಂದು ಕೆ.ಜಿ ದರ ಸ್ಥಳೀಯ ಮಾರುಕಟ್ಟೆಯಲ್ಲಿ 60-70. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಈ ಅಕ್ಕಿಗೆ ಭಾರಿ ಬೇಡಿಕೆ ಇದೆ' ಎಂದು ಅವರು ತಿಳಿಸಿದರು.
'ವಾಡಾ ತಾಲ್ಲೂಕಿನ 180 ಗ್ರಾಮಗಳ 2,500 ಜನ ರೈತರು ಈ ಅಕ್ಕಿ ಕೃಷಿಯಲ್ಲಿ ತೊಡಗಿದ್ದಾರೆ' ಎಂದು ಮೂರನೇ ತಲೆಮಾರಿನ ಕೃಷಿಕ ಅನಿಲ್ ಪಾಟೀಲ್ ಹೇಳಿದರು.