ನವದೆಹಲಿ: ನೂತನ ಗಡಿ ಕಾನೂನನ್ನು ರೂಪಿಸಿರುವ ಚೀನಾದ ಕ್ರಮವನ್ನು ಭಾರತ ಬುಧವಾರ ಟೀಕಿಸಿದೆ.
'ಚೀನಾ ಕೈಗೊಂಡಿರುವ ಈ ಏಕಪಕ್ಷೀಯ ನಿರ್ಧಾರ ಕಳವಳಕಾರಿ. ಇದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಗಡಿ ನಿರ್ವಹಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
'ನೂತನ ಗಡಿ ಕಾಯ್ದೆಯ ನೆಪದಲ್ಲಿ ಎರಡೂ ದೇಶಗಳ ನಡುವಿನ ಗಡಿಯಲ್ಲಿನ ಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಚೀನಾ ಮುಂದಾಗದು ಎಂಬ ನಿರೀಕ್ಷೆಯನ್ನು ಭಾರತ ಹೊಂದಿದೆ' ಎಂದು ಅವರು ಹೇಳಿದ್ದಾರೆ.
'ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಈಗಾಗಲೇ ಏರ್ಪಟ್ಟಿರುವ ಮಾತುಕತೆ ಮೇಲೆ ನೂತನ ಕಾಯ್ದೆಯಡಿ ಕೈಗೊಳ್ಳುವ ಕ್ರಮಗಳು ಪರಿಣಾಮ ಬೀರುವುದಿಲ್ಲ' ಎಂದೂ ಅವರು ಪ್ರತಿಪಾದಿಸಿದರು.