ತಿರುವನಂತಪುರ: ಅತ್ಯುತ್ತಮ ಸುಸ್ಥಿರ ನಗರ ಸಾರಿಗೆ ವ್ಯವಸ್ಥೆಗೆ ಕೇಂದ್ರ ಸರ್ಕಾರ ಕೊಡಮಾಡುವ ಪ್ರಶಸ್ತಿಯನ್ನು ಕೇರಳ ಪಡೆದುಕೊಂಡಿದೆ. ಸಾರಿಗೆ ಸಚಿವ ಆಂಟನಿ ರಾಜು ಕೇರಳವು 'ಅತ್ಯಂತ ಸಮರ್ಥನೀಯ ಸಾರಿಗೆ ವ್ಯವಸ್ಥೆ ಹೊಂದಿರುವ ನಗರ' ಪ್ರಶಸ್ತಿಯನ್ನು ಸ್ವೀಕರಿಸಿದೆ ಎಂದು ಘೋಷಿಸಿದರು.
ಇದು ನಗರ ಸಾರಿಗೆ ಕ್ಷೇತ್ರದಲ್ಲಿನ ಶ್ರೇಷ್ಠತೆಗಾಗಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನೀಡುವ ಪ್ರಶಸ್ತಿಯಾಗಿದೆ. ಕೊಚ್ಚಿ ಮೆಟ್ರೋ, ವಾಟರ್ ಮೆಟ್ರೋ ಮತ್ತು ಇ-ಮೊಬಿಲಿಟಿ ಮೂಲಕ ಕೊಚ್ಚಿ ನಗರದಲ್ಲಿ ಸಾರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಜಾರಿಗೆ ತಂದ ಯೋಜನೆಗಳನ್ನು ಪ್ರಶಸ್ತಿ ಗುರುತಿಸುತ್ತದೆ. ಡಿಜಿಟಲೀಕರಣಗೊಂಡು ಏಕೀಕರಣಗೊಂಡಿರುವ ಕೊಚ್ಚಿ ಓಪನ್ ಮೊಬಿಲಿಟಿ ನೆಟ್‍ವರ್ಕ್‍ನ ರಚನೆಯು ಪ್ರಶಸ್ತಿ ಗೆಲ್ಲಲು ಸಹಕಾರಿಯಾಗಿದೆ ಎಂದು ಸಚಿವರು ಹೇಳಿದರು.
ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರಿಗೆ ಸೌಲಭ್ಯಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅಕ್ಟೋಬರ್ 29 ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.