ಕುಂಬಳೆ: ಭಾಷೆಗಳು ಸಾಮಾಜಿಕ ಕುಟುಂಬ ವ್ಯವಸ್ಥೆಯ ಕೇವಲವಾದ ಸಂವಹನ ವ್ಯವಸ್ಥೆಯಷ್ಟೇ ಆಗದೆ ಸಮಷ್ಠಿ ಪ್ರಜ್ಞೆಯ ಮಾಧ್ಯಮ ಸ್ವರೂಪವಾಗಿದೆ. ಕಲೆ, ಸಾಹಿತ್ಯ, ಸಂಗೀತ ಪ್ರಕಾರಗಳು ಭಾಷೆಯ ಸುದೃಢ ಬೆಳವಣಿಗೆಗೆ ಪೂರಕವಾದುದಾಗಿದ್ದು, ಪರಂಪರೆಯ ಅರಿವಿನೊಂದಿಗೆ ಮುನ್ನಡೆಸುವ ಜವಾಬ್ದಾರಿ ಸಮಾಜದ್ದಾಗಿದೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕಿ ಲಕ್ಷ್ಮೀ ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲದ ಸವಿ ಹೃದಯದ ಕವಿ ಮಿತ್ರರು ವೇದಿಕೆ ನೇತೃತ್ವದಲ್ಲಿ ಭಾನುವಾರ ಅಪರಾಹ್ನ ಕುಂಬಳೆ ಪ್ರೆಸ್ ಪೋರಂ ಸಭಾಂಗಣದಲ್ಲಿ ನಡೆದ ನವರಾತ್ರಿ ಸಾಹಿತ್ಯ ಸಂಭ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕ ಕನ್ನಡ ಸಾಹಿತ್ಯದ ಯುವ ಬರಹಗಾರರು ಅನುಭವ-ಅನುಭಾವಗಳ ಗೊಂದಲಗಳ, ಅಪಕ್ವತೆಯ ಮಧ್ಯೆ ತೊಡಗಿಸಿಕೊಂಡಿರುವುದು ಭೀತಿಗೊಳಪಡಿಸಿದೆ. ಓದು, ಜೀವನಾನುಭವ, ಪಕ್ವತೆಗಳ ಮೂಲಕ ಗಟ್ಟಿಗೊಂಡ ಅಕ್ಷರಗಳು ಸಾರ್ವಕಾಲಿಕ ಮೌಲ್ಯಗಳೊಂದಿಗೆ ಅವಿನಾಶಿಯಾಗಿರುತ್ತದೆ. ಅಂತರಂಗದ ಕತ್ತಲನ್ನು ತೊಡೆದು ನವೋತ್ಥಾನದ ಬೆಳಕು ನಮ್ಮನ್ನು ಪರಿಪಕ್ವಗೊಳಿಸಲಿ ಎಂದು ಅವರು ಕರೆನೀಡಿದರು.
ಯುವ ಯಕ್ಷಗಾನ, ನಾಟಕ ಕಲಾವಿದ ಸೋಮನಾಥ ಶೆಟ್ಟಿ ಮಂಗಲ್ಪಾಡಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ವ್ಯಕ್ತಿ, ವ್ಯಕ್ತಿತ್ವವನ್ನು ರೂಪಿಸುವಲ್ಲಿ ಕಲೆ, ಸಾಹಿತ್ಯಗಳು ಮಹತ್ತರ ಕೊಡುಗೆಯನ್ನು ನೀಡುತ್ತದೆ. ಗಡಿನಾಡು ಕಾಸರಗೋಡಿನ ಕನ್ನಡ-ತುಳು ಅಸ್ಮಿತೆಯನ್ನು ಗಟ್ಟಿಗೊಳಿಸಲು ಇಂತಹ ಸಾಹಿತ್ತಿಕ ಚಟುವಟಿಕೆಗಳು ನಿರಂತರವಾಗಿರಲಿ ಎಂದು ತಿಳಿಸಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಸಂಘಟಕ ಪ್ರೊ.ಎ.ಶ್ರೀನಾಥ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಸಾಹಿತಿ, ಕಲಾವಿದರ ಪ್ರತಿಭೆಗಳನ್ನು ಬೆಳಕಿಗೆ ತರುವ ವೇದಿಕೆಗಳು ಸಕ್ರಿಯಗೊಳ್ಳಬೇಕು. ಕೋವಿಡ್ ಕಾರಣದಿಂದ ಮರೆಯಲ್ಲಿರುವ ಸಾಧಕರು, ಕವಿ, ಕಲಾವಿದರ ಗೊಂದಲಗಳಿಗೆ ಇಂತಹ ಸಂಯೋಜನೆಗಳು ಬೆಂಬಲ ನೀಡುತ್ತದೆ ಎಂದು ತಿಳಿಸಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭ ರಾಧಾಕೃಷ್ಣ ಉಳಿಯತ್ತಡ್ಕ ಅವರು ಬರೆದು ಪ್ರಕಟಿಸಿರುವ ಅಂಬೇಡ್ಕರ್ ಅವರ ಜೀವನ ಕಥನ ಕವನ ರಾಮ ಕಂಡ ಭೀಮ ಕೃತಿಯನ್ನು ಕನ್ನಡ ಯುವ ಬಳಗ ಕಾಸರಗೋಡು ಇದರ ಅ|ಧ್ಯಕ್ಷ, ಸಾಹಿತ್ಯ ವಿದ್ಯಾರ್ಥಿ ಕಾರ್ತಿಕ್ ಪಡ್ರೆ ಅವರು ಅವಲೋಕನ ನಡೆಸಿದರು.
ಬಳಿಕ ನಡೆದ ಕವಿಗೋಷ್ಠಿಯಲ್ಲಿ ನವೀನ್ ಕುಲಾಲ್ ಚಿಪ್ಪಾರ್, ಹಿತೇಶ್ ಕುಮಾರ್ ಎ., ದೇವರಾಜ್ ಕೆ.ಎಸ್ ಆಚಾರ್ಯ, ಲಕ್ಷ್ಮೀ ಕೆ. ಕುಂಬಳೆ, ಪುರುಷೋತ್ತಮ ಭಟ್ ಕೆ ಸ್ವರ ರಚಿತ ಕವನಗಳನ್ನು ವಾಚಿಸಿದರು. ವೇದಿಕೆಯ ಸಂಚಾಲಕ ಪುರುಷೋತ್ತಮ ಭಟ್ ಕೆ. ಸ್ವಾಗತಿಸಿ, ನಿರೂಪಿಸಿದರು. ಸಹ ಸಂಚಾಲಕ ಸುಭಾಶ್ ಪೆರ್ಲ ವಂದಿಸಿದರು.