ಕಾಸರಗೋಡು: ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಆರೋಗ್ಯ ವಲಯಗಳಿಗೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಬಹುಮಾನ ವಿತರಣೆ ಜರುಗಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಪರಿಸರ, ಜನಸೌಹಾರ್ದ, ಆರೋಗ್ಯಯುತ ವಾತಾವರಣ, ಸೌದರ್ಯೀಕರಣ ಸಹಿತ ವಿವಿಧ ವಲಯಗಳಲ್ಲಿ ನಡೆಸಲಾದ ಸಾಧನೆಗಳ ಹಿನ್ನೆಲೆಯಲ್ಲಿ ಬಹುಮಾನ ವಿತರಿಸಲಾಯಿತು. ಮೌಕೋಡು ಕುಟುಂಬ ಆರೋಗ್ಯ ಕೇಂದ್ರ, ಪಾಣತ್ತೂರು ಕುಟುಂಬ ಆರೋಗ್ಯ ಕೇಂದ್ರ, ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರಗಳಿಗೆ ಯಥಾಕ್ರಮದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳು ಲಭಿಸಿವೆ. ವಿವಿಧ ವಲಯಗಳಲ್ಲಿ ವಿವಿಧ ಸಂಸ್ಥೆಗಳಿಗೆ ಬೇರೆ ಬೇರೆ ಬಹುಮಾನಗಳು ಬಂದಿವೆ. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಮುಖ್ಯ ಅತಿಥಿಯಾಗಿದ್ದರು. ರಾಷ್ಟ್ರೀಯ ಆರೋಗ್ಯ ದೌತ್ಯ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ರಿಜಿತ್ ಕೃಷ್ಣನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಖದೀಜಾ, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಟಿ.ಮನೋಜ್, ಕಾಸರಗೋಡು ಜನರಲ್ ಆಸ್ಪತ್ರೆಯ ವರಿಷ್ಠಾಧಿಕಾರಿ ಡಾ.ಕೆ.ಕೆ.ರಾಜಾರಾಮ ಮೊದಲಾದವರು ಉಪಸ್ಥಿತರಿದ್ದರು.