ಪೆರ್ಲ: ಅಡಕೆ ಬೆಳೆಯಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ ಬಗ್ಗೆ ಕಾರ್ಯಾಗಾರ ಬೆದ್ರಂಪಳ್ಳ ಸನಿಹದ ಎಣ್ಮಕಜೆ ಫಾರ್ಮ್‍ನಲ್ಲಿ ಜರುಗಿತು. ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐ) ಕಾಸರಗೋಡು ಹಾಗೂ ಕೋಯಿಕ್ಕೋಡಿನ ಅಡಕೆ ಮತ್ತು ಸಾಂಬಾರ ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ಕಾರ್ಯಕ್ರ ಆಯೋಜಿಸಲಾಗಿತ್ತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಸಮಾರಂಭ ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ರಾಧಾಕೃಷ್ಣ ಮಾಸ್ಟರ್ ಉಪಸ್ಥಿತರಿದ್ದರು.
ಅಡಕೆಗೆ ತಗಲುವ ರೋಗ ಹಾಗೂ ಅವುಗಳ ನಿಯಂತ್ರಣದ ಬಗ್ಗೆ ಸಿಪಿಸಿಆರ್‍ಐ ಸಸ್ಯ ಸಂರಕ್ಷಣಾ ವಿಭಾಗದ ವಿಜ್ಞಾನಿ ಡಾ. ರಾಜ್‍ಕುಮಾರ್, ವಿಜ್ಞಾನಿಗಳಾದ ಡಾ. ರವಿ ಭಟ್, ಡಾ. ಪ್ರತಿಭಾ ಅವರು ಅಡಕೆಗೆ ತಗಲುವ ರೋಗ, ಕೀಟ ನಿಯಂತ್ರಣ ಹಾಗೂ ಗಿಡಗಳ ಪೋಷಣೆ ಬಗ್ಗೆ ಮಾಹಿತಿ ನೀಡಿದರು. ಅಡಕೆಗೆ ತಗಲುವ ಮಾರಕ ಹಳದಿ ರೋಗದ ಬಗ್ಗೆಯೂ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು. ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಮಾರಕ ಕೀಟನಾಶಕಗಳ ಬಳಕೆ ಕೃಷಿಭೂಮಿಯ ಫಲವತ್ತತೆಯ ನಾಶಕ್ಕೆ ಕಾರಣವಾಗಲಿದೆ. ಸಾವಯವ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಮಾತ್ರ ಸ್ವಾಭಾವಿಕ ಕೃಷಿಯನ್ನು ಉತ್ತೇಜಿಸಿ ಮಣ್ಣಿನ ಸಂರಕ್ಷಣೆ ಮಾಡಲು ಸಾಧ್ಯ ಎಂಬ ಅಂಶವನ್ನು ಸಂಪನ್ಮೂಲ ವ್ಯಕ್ತಿಗಳು ಕೃಷಿಕರಿಗೆ ಮನದಟ್ಟುಮಾಡಿದರು. 35ಕ್ಕೂ ಹೆಚ್ಚು ಮಂದಿ ಕೃಷಿಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಶ್ರೀಧರ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.