ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಮೊದಲ ಹಂತವಾಗಿ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿರುವ ಮರಗಳನ್ನು ತೆರವುಗೊಳಿಸಲು ಸರ್ಕಾರವು ಗುತ್ತಿಗೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ತಲಪಾಡಿಯಿಂದ ಮರಗಳ ಮಾರಣ ಹೋಮದದ ಪ್ರಕ್ರಿಯೆ ಆರಂಭಗೊಂಡಿದೆ.
ಬೃಹತ್ ಮರಗಳನ್ನು ಕಡಿದು ಅದರ ರೆಂಬೆಗಳನ್ನು ರಸ್ತೆ ಬದಿಗಳಲ್ಲಿ ಹಾಗೂ ಬಸ್ಸು ನಿಲ್ದಾಣ ಪರಿಸರಗಳಲ್ಲಿ ಮತ್ತು ಸಾರ್ವಜನಿಕರು ನಡೆದಾಡುತ್ತಿರುವ ಸ್ಥಳಗಳಲ್ಲಿ ಉಪೇಕ್ಷಿಸಿ ಅದನ್ನು ತೆರವುಗೊಳಿಸದೇ ಇರುವುದು ಸಾರ್ವಜನಿಕರಿಗೆ ಸಮಸ್ಯೆಯನ್ನು ಸೃಷ್ಟಿಯಾಗಿರುವುದು ಕಂಡುಬಂದಿದೆ. ಕುಂಜತ್ತೂರು, ಉದ್ಯಾವರ, ಪೊಸೋಟು, ಮಂಜೇಶ್ವರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ಬಸ್ಸು ತಂಗುದಾಣ ಹಾಗೂ ಸಾರ್ವಜನಿಕರು ನಡೆದಾಡುತ್ತಿರುವ ಸ್ಥಳಗಳಲ್ಲಿ ಮರದ ರೆಂಬೆಗಳನ್ನು ಹಾಕಲಾಗಿದ್ದು, ಅದರ ಮೇಲೆ ಮಳೆ ನೀರು ಬಿದ್ದು ಸಾರ್ವಜನಿಕರಿಗೆ ನಡೆದಾಡಲು ಹಾಗೂ ಬಸ್ಸು ತಂಗುದಾಣಕ್ಕೆ ತಲುಪಲು ಸಂಕಷ್ಟ ಎದುರಾಗಿದೆ.
ಸ್ಥಳೀಯರು ಗುತ್ತಿಗೆದಾರನಲ್ಲಿ ಹಲವು ಬಾರಿ ವಿನಂತಿಸಿಕೊಂಡರೂ ಕಂಡೂ ಕಾಣದ ಜಾಣ ಕುರುಡುನಂತೆ ವರ್ತಿಸುತ್ತಿರುವ ಗುತ್ತಿಗೆದಾರ ನಿರ್ಲಕ್ಷ್ಯಿಸುತ್ತಿರುವುದಾಗಿ ದೂರಲಾಗಿದೆ. ಕೆಲವೊಂದು ಸ್ಥಳಗಳಲ್ಲಿ ಕ್ರೇನ್ ಓಪರೇಟರ್ ನ ಜೇಬನ್ನು ತುಂಬಿಸಿದರೆ ಅಲ್ಲಿಂದ ಮರದ ರೆಂಬೆಗಳನ್ನು ತೆರವುಗೊಳಿಸುತ್ತಿರುವುದು ತಿಳಿದು ಬಂದಿದೆ. ಇನ್ನು ಕೆಲವು ಕಡೆಗಳಲ್ಲಿ ರೆಂಬೆಗಳನ್ನು ತೆರವುಗೊಳಿಸಬೇಕಾದರೆ ಜೇಬು ತುಂಬಿಸಲು ಒತ್ತಡ ಹೇರುತ್ತಿರುವುದಾಗಿಯೂ ನಾಗರೀಕರು ದೂರುತಿದ್ದಾರೆ. ಸಂಬಂಧಪಟ್ಟವರು ಇತ್ತಕಡೆ ಗಮನ ಹರಿಸಿ ಇದಕ್ಕೊಂದು ಪರಿಹಾರವನ್ನು ಕಾಣುವಂತೆ ನಾಗರಿಕರು ಆಗ್ರಹಿಸಿದ್ದಾರೆ.