ಕಾಸರಗೋಡು: ಯುನಿವರ್ಸಲ್ ಇಮ್ಯೂನೈಸೇಷನ್ ಕಾರ್ಯಕ್ರಮ ಅಂಗವಾಗಿ ಚಿಕ್ಕ ಮಕ್ಕಳಿಗೆ ನ್ಯೂಮೋಕೋಕ್ಕಲ್ ಕನ್ಜ್ಯೂಗೆಟ್ ವಾಕ್ಸಿನ್ ವಿತರಣೆ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ. ಜಿಲ್ಲಾ ಮಟ್ಟದ ವಿತರಣೆಯ ಉದ್ಘಾಟನೆ ಆನಂದಾಶ್ರಮ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಜರುಗಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಅಜಾನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಟಿ.ಶೋಭಾ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಜಿಲ್ಲಾ ವೈದ್ಯಾಧಿಕಾರಿ ಡಾ.ಇ.ಮೋಹನನ್ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಎ.ಮುರಳೀಧರ ನಲ್ಲೂರಾಯ ಉಪನ್ಯಾಸ ಮಾಡಿದರು. ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು.
ನ್ಯೂಮೋಕೋಕ್ಕಲ್ ರೋಗ ಪ್ರತಿರೋಧ ರೂಪದಲ್ಲಿ ಒಂದೂವರೆ ತಿಂಗಳ ಪ್ರಾಯದ ಎಲ್ಲ ಶಿಶುಗಳಿಗೆ ನ್ಯೂಮೋ ಕೋಕ್ಕಲ್ ಕನ್ಜ್ಯೂಗೆಟ್ ವಾಕ್ಸಿನ್(ಪಿ.ಸಿ.ವಿ.) ನೀಡಬೇಕು. ಶಿಶುವಿಗೆ ಒಂದೂವರೆ ತಿಂಗಳ ಪ್ರಾಯವಾದಾಗ ಇತರ ಲಸಿಕೆಗಳ ಜೊತೆಗೆ ಪಿ.ಸಿ.ವಿ. ನೀಡಿದರೆ ಸಾಕು. ಈ ಲಸಿಕೆಯ ಮೊದಲ ಡೋಸ್ ಸ್ವೀಕಾರಕ್ಕೆ ವಯೋಮಿತಿ ಒಂದು ವರ್ಷ. ಒಂದೂವರೆ ತಿಂಗಳ ಮೊದಲ ಡೋಸ್ ನ ನಂತರ ಮೂರೂವರೆ ತಿಂಗಳು, 9 ತಿಂಗಳ ಅವಧಿಯಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ.