ನವದೆಹಲಿ: ಇದು ಸಾಮಾನ್ಯವಾಗಿ ಎಲ್ಲರ ಮದುವೆ ಮನೆಗಳಲ್ಲಿಯೂ ನಡೆಯುತ್ತಿರುತ್ತದೆ. ಅದೇನೆಂದರೆ ಮದುವೆಗೆ ಬರುವ ಅತಿಥಿಗಳಿಗೆ ಕಾಡಿ ಬೇಡಿ ಊಟ ಮಾಡಿಕೊಂಡು ಹೋಗಿ ಎಂದು ಮದುಮಕ್ಕಳಾದಿಯಾಗಿ ಎಲ್ಲರೂ ಹೇಳಿದರೂ, ಮದುವೆಗೆ ಬರುವ ಫೋಟೋಗ್ರಾಫರ್ ಅಥವಾ ಇನ್ನಿತರ ಕೆಲಸಗಾರರನ್ನು ಕಡೆಗಣಿಸಲಾಗುತ್ತದೆ. ಊಟ, ತಿಂಡಿಯ ವೇಳೆಯಾದರೂ ಫೋಟೋ ತೆಗೆದುಕೊಳ್ಳುವಲ್ಲಿ ಬಿಜಿಯಾಗಿರುವ ಮದುಮಕ್ಕಳು ಮತ್ತು ಕುಟುಂಬಸ್ಥರು ಅವರಿಗೆ ಊಟ ಮಾಡಿದ್ರಾ ಎಂದು ಕೇಳುವುದೇ ಕಡಿಮೆ.
ಅಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದ್ದು, ಇದೀಗ ಭಾರಿ ವೈರಲ್ ಆಗಿದೆ. ಅದಕ್ಕೆ ಕಾರಣ, ಊಟ, ತಿಂಡಿ, ನೀರನ್ನೂ ಕೊಡದೆ ದಿನಪೂರ್ತಿ ದುಡಿಸಿಕೊಂಡ ಕಾರಣ ಫೋಟೋಗ್ರಾಫರ್ ಒಬ್ಬ ಸಿಟ್ಟಿನಿಂದ ಸಂಜೆ ಮದುವೆ ಸಮಾರಂಭ ಸಂಪೂರ್ಣ ಫೋಟೋಗಳನ್ನು ವಧು-ವರನ ಎದುರಿಗೇ ಡಿಲೀಟ್ ಮಾಡಿ ಮದುವೆ ಮನೆಯಿಂದ ಹೊರನಡೆದಿದ್ದಾನೆ.ಅಷ್ಟಕ್ಕೂ ಆಗಿದ್ದೇನೆಂದರೆ, ಹಣವನ್ನು ಉಳಿಸುವುದಕ್ಕಾಗಿ ಮದುಮಗ ತನ್ನ ಸ್ನೇಹಿತನಿಗೆ ಫೋಟೋಗ್ರಾಫರ್ ಆಗಿ ಬರಲು ಹೇಳಿದ್ದಾನೆ. ನಾಯಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಶೇರ್ ಮಾಡುವುದಲ್ಲಿ ಪಳಗಿರುವ ಸ್ನೇಹಿತ ತಾನು ಮದುವೆ ಫೋಟೋಗ್ರಫಿಗೆ ಬರುವುದಿಲ್ಲ ಎಂದರೂ ಕೇಳದೇ ಮದುಮಗ ಒತ್ತಾಯ ಮಾಡಿದ್ದಾನೆ. ಕೊನೆಗೆ ಇಂತಿಷ್ಟು ದುಡ್ಡು ಎಂದು ಮಾತುಕತೆ ನಡೆಸಿ ಸ್ನೇಹಿತ ಒಪ್ಪಿಕೊಂಡಿದ್ದಾನೆ.
ಬೆಳಗಿನ ಜಾವದಿಂದ ಸಂಜೆಯವರೆಗೂ ಮದುವೆ ಕಾರ್ಯಕ್ರಮ ನಡೆದಿದೆ. ಆದರೆ ಒಂದೇ ಒಂದು ಸಲವೂ ಯಾರೂ ಈ ಫೋಟೋಗ್ರಾಫರ್‌ನನ್ನು ಮಾತನಾಡಿಸಲಿಲ್ಲ. ಊಟ, ತಿಂಡಿಗೂ ಕೇಳಲಿಲ್ಲ. ಈತ ಅಲ್ಲಿರುವವರ ಬಳಿ ಬಾಯಿಬಿಟ್ಟು ಹೇಳಿದರೂ ಇದೊಂದು ಫೋಟೋ ಇದೊಂದು ಫೋಟೋ ಎನ್ನುತ್ತಲೇ ಕಾಲ ಕಳೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಫೋಟೋಗ್ರಾಫರ್ ಮದುವೆ ಕಾರ್ಯಕ್ರಮ ಮುಗಿಯುವವರೆಗೆ ಕಾದು ನಂತರ ಸಂಪೂರ್ಣ ಫೋಟೋ ಡಿಲೀಟ್ ಮಾಡಿ ಸೇಡು ತೀರಿಸಿಕೊಂಡಿದ್ದಾನೆ!
'ಸಂಜೆಯವರೆಗೂ ಊಟ, ತಿಂಡಿ ನೀಡಲಿಲ್ಲ. ಸಿಕ್ಕಾಪಟ್ಟೆ ಸೆಖೆ ಬೇರೆ ಇತ್ತು. ಈ ನಡುವೆ ಒಂದು ಲೋಟ ನೀರನ್ನೂ ಯಾರೂ ಕೇಳಲಿಲ್ಲ. ಆದ್ದರಿಂದ ಹೀಗೆ ಮಾಡಿದೆ ಎಂದು ತನಗಾಗಿರುವ ಅನುಭವಗಳನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ ಫೋಟೋಗ್ರಾಫರ್. ಇದಕ್ಕೆ ನೂರಾರು ಕಮೆಂಟ್‌ಗಳು ಬಂದಿದ್ದು, ತಾವು ಇನ್ನುಮುಂದೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದವರೇ ಅಧಿಕ ಮಂದಿ.