ಕಾಸರಗೋಡು: ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇಪ್ಪತ್ತನೇ ವರ್ಷದ ಆಚರಣೆಯ ಅಂಗವಾಗಿ ಕಾಸರಗೋಡಿನ ಶ್ಯಾಮಪ್ರಸಾದ್ ಮುಖರ್ಜಿ ಮಂದಿರ ( ಬಿಜೆಪಿ ಕಾರ್ಯಾಲಯ)ದಲ್ಲಿ ಇತ್ತೀಚೆಗೆ ನಮೋ ಕಾವ್ಯಾಮೃತ ವಿಶೇಷ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.
ಬಿಜೆಪಿ ಜಿಲ್ಲಾ ಅಧ್ಯಕ್ಷರಾದ (ಪ್ರಸಕ್ತ ಬಿಜೆಪಿ ರಾಜ್ಯ ಕಾರ್ಯದರ್ಶಿ)ನ್ಯಾಯವಾದಿ ಕೆ. ಶ್ರೀಕಾಂತ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯ ಕವಿಗಳಾದ ರಾಧಾಕೃಷ್ಣ ಕೆ. ಉಳಿಯಡ್ಕ ದೀಪ ಬೆಳಗಿಸಿ ಚಾಲನೆ ನೀಡಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ್ ಸುಲಯ ಒಡ್ಡಂಬೆಟ್ಟು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಂಘಟಕರಾದ ಬಾಬುರಾಜ್,ಜಿಲ್ಲಾ ಕಾರ್ಯದರ್ಶಿ ಸವಿತ ಟೀಚರ್ , ಜಿಲ್ಲಾ ಕಾರ್ಯದರ್ಶಿ ಮನು ಲಾಲ್ ಮೇಲೋತ್, ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಸಂಪತ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಪುಷ್ಪಾ ಗೋಪಾಲನ್ ಉಪಸ್ಥಿತರಿದ್ದರು. ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕವಿಗಳು ಭಾಗವಹಿಸಿ ಪ್ರಧಾನಿಯವರ ಸಾಧನೆಗಳ ಕುರಿತಾದ ಕವನಗಳನ್ನು ವಾಚಿಸಿದರು. ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್ ತಮ್ಮ ಕವನ ವಾಚಿಸಿ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದ ಸಂಚಾಲಕರಾದ ಶ್ರೀಕಾಂತ್ ನೆಟ್ಟಣಿಗೆ ಸ್ವಾಗತಿಸಿದರು. ಶ್ಯಾಮಲಾ ರವಿರಾಜ್ ಹಾಗೂ ಸಂಧ್ಯಾಗೀತಾ ಬಾಯಾರು ವಂದೇಮಾತರಂ ಹಾಡಿದರು. ಸವಿತಾ ಟೀಚರ್ ಧನ್ಯವಾದವಿತ್ತರು. ವಿದ್ಯಾ ಗಣೇಶ್ ಅಣಂಗೂರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.