ನವದೆಹಲಿ: ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 146ನೇ ಜನ್ಮಜಯಂತಿಯಾಗಿದ್ದು, ದೇಶಾದ್ಯಂತ ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ನ ಕೇವಾಡಿಯಾದಲ್ಲಿರುವ ವಲ್ಲಭಭಾಯಿಯವರ 182 ಮೀಟರ್ ಎತ್ತರದ ಏಕತಾ ಮೂರ್ತಿಯ ಬಳಿ ತೆರಳಿ ಗೌರವ ಸಲ್ಲಿಸಿದ್ದಾರೆ.
ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಪಟೇಲ್ ಜಿ ಜನ್ಮದಿನವನ್ನು 2014ರಿಂದಲೂ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಿಂಗಳ ಕಾರ್ಯಕ್ರಮ ಮನ್ ಕೀ ಬಾತ್ನಲ್ಲಿ ಕೂಡ ರಾಷ್ಟ್ರೀಯ ಏಕತಾ ದಿನ ಆಚರಣೆಯನ್ನು ನೆನಪಿಸಿದ್ದರು.
ಸದ್ಯ ರೋಮ್ ಪ್ರವಾಸದಲ್ಲಿರುವ ಅವರು, ಬೆಳಗ್ಗೆ ಟ್ವೀಟ್ ಮಾಡಿ ಸರ್ದಾರ್ ವಲ್ಲಭಭಾಯಿ ಅವರ ಜೀವನದ ಬಗ್ಗೆ ತಾವು ಮಾತನಾಡಿದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡು ಗೌರವ ಸಲ್ಲಿಸಿದ್ದಾರೆ.
ನಮ್ಮ ರಾಷ್ಟ್ರದ ಹಿರೋ ಸರ್ದಾರ್ ವಲ್ಲಭಭಾಯಿ ಪಟೇಲ್ರಿಗೆ ಇಂದು ಇಡೀ ರಾಷ್ಟ್ರ ಗೌರವ ಸಲ್ಲಿಸುತ್ತಿದೆ. ಅವರು ತಮ್ಮ ಜೀವನದ ಪ್ರತಿ ಕ್ಷಣವನ್ನೂ ಏಕ್ ಭಾರತ್, ಶ್ರೇಷ್ಠ ಭಾರತಕ್ಕಾಗಿ ಮುಡಿಪಾಗಿಟ್ಟಿದದರು. ಇವತ್ತಿಗೂ ಕೋಟ್ಯಂತರ ಭಾರತೀಯರ ಹೃದಯದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಮತ್ತಿತರ ಗಣ್ಯರು ಕೂಡ ಸರ್ದಾರ್ ವಲ್ಲಭಭಾಯಿ ಅವರಿಗೆ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಕಾರ್ಯಕ್ರಮವನ್ನು ಇಂದು ಗುಜರಾತ್ನ ಕೇವಾಡಿಯಾದಲ್ಲಿರುವ 182 ಮೀಟರ್ ಎತ್ತರದ ಏಕತಾ ಪ್ರತಿಮೆ ಸಮೀಪವೇ ನಡೆಸಲಾಗುವುದು. ಈ ಮೊದಲು ಪ್ರಧಾನಿ ನರೇಂದ್ರ ಮೋದಿಯವರೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಗುಜರಾತ್ ಮುಖ್ಯಮಂತ್ರಿ ಕಚೇರಿ ತಿಳಿಸಿತ್ತು. ಆದರೆ ಅವರು ರೋಮ್ನಲ್ಲಿ ಇರುವ ಕಾರಣ ಅಮಿತ್ ಶಾ ಆಗಮಿಸಿದ್ದಾರೆ.