ಲಖನೌ: ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಹಾಗೂ ಇತರ ಹಲವು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಯಾವ ಪ್ರಕರಣಗಳ ಅಡಿಯಲ್ಲಿ ದಾಖಲಿಸಲಾಗಿದೆ ಎಂಬ ವಿವರಗಳು ಇನ್ನೂ ಲಭ್ಯವಾಗಿಲ್ಲ.
ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಕುಮಾರ್ ಅವಸ್ಥಿ ಪ್ರತಿಕ್ರಿಯೆ ನೀಡಿದ್ದು, 'ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ಹಲವಾರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದರೆ, ಎಫ್‌ಐಆರ್‌ನ ನಕಲು ಇನ್ನೂ ಲಭ್ಯವಾಗಿಲ್ಲದ ಕಾರಣ, ಅದನ್ನು ಯಾವ ವಿಭಾಗದಲ್ಲಿ ನೋಂದಾಯಿಸಲಾಗಿದೆ ಎಂಬುದು ತಿಳಿದಿಲ್ಲ' ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಲಖಿಂಪುರದಲ್ಲಿ ಬೀಡುಬಿಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಪ್ರಶಾಂತ್ ಕುಮಾರ್ ಅವರು ಮಾತನಾಡಿ, 'ನಾನು ಸ್ಥಳದಲ್ಲಿದ್ದೇನೆ. ಘಟನೆಗೆ ಸಂಬಂಧಿಸಿದಂತೆ ಎರಡು ಕಡೆಯಿಂದಲೂ ಒಂದೊಂದು ಎಫ್‌ಐಆರ್ ದಾಖಲಿಸಲಾಗಿದೆ. ಇಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸದ ಕಾರಣ ವಿವರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ನಾವು ಈ ಬಗ್ಗೆ ಶೀಘ್ರವೇ ಮಾಧ್ಯಮಗಳಿಗೆ ತಿಳಿಸುತ್ತೇವೆ' ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದ ಪರಿಣಾಮ ರೈತರು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿ 8 ಮಂದಿ ನಿನ್ನೆ ಮೃತಪಟ್ಟಿದ್ದರು.
ಮೃತಪಟ್ಟವರಲ್ಲಿ ನಾಲ್ವರು ಉತ್ತರ ಪ್ರದೇಶದ ಸಚಿವರನ್ನು ಸ್ವಾಗತಿಸಲು ಬಂದಿದ್ದ ಬಿಜೆಪಿ ಕಾರ್ಯಕರ್ತರು ಬೆಂಗಾವಲು ಪಡೆಯ ಕಾರಿನಲ್ಲಿದ್ದವರು. ಅವರನ್ನು ಥಳಿಸಲಾಗಿದೆ. ಉಳಿದ ನಾಲ್ವರು ರೈತರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದಾಗ್ಯೂ, ಕೆಲವು ರೈತ ಮುಖಂಡರು ಆರೋಪಿಸಿರುವಂತೆ ಅವರು ಮತ್ತು ಅವರ ಮಗ ಸ್ಥಳದಲ್ಲಿ ಇರಲಿಲ್ಲ ಮತ್ತು ಅದನ್ನು ಸಾಬೀತುಪಡಿಸಲು ತಮ್ಮ ಬಳಿ ಫೋಟೊ ಮತ್ತು ವಿಡಿಯೊ ಪುರಾವೆಗಳಿವೆ ಎಂದು ಅಜಯ್ ಮಿಶ್ರಾ ತಿಳಿಸಿದ್ದಾರೆ.