ಕಾಸರಗೋಡು: ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾಞಂಗಾಡು ನಗರದಲ್ಲಿ ಕೈಗೆತ್ತಿಕೊಂಡಿರುವ ಕಾಞಂಗಾಡು ಟೌನ್ ಸ್ಕ್ವೇರ್ ನಿರ್ಮಾಣಕಾರ್ಯ ಪ್ರಗತಿಯಲ್ಲಿದ್ದು, ಶಾಸಕ ಇ.ಚಂದ್ರಶೇಖರನ್ ಕಾಮಗಾರಿಗಳ ಅವಲೋಕನ ನಡೆಸಿದರು.
ಕಾಸರಗೋಡು ಪ್ಯಾಕೇಜ್ ಅನ್ವಯ 59ಲಕ್ಷ ರೂ. ಸೇರಿದಂತೆ ಪ್ರವಾಸೋದ್ಯಮ ಇಲಾಖೆಯ 4.98ಕೋಟಿ ರೂ. ಮೊತ್ತದ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕಾಞಂಗಾಡು ನಗರಸಭಾಂಗಣದ ಎದುರು ಕಾಸರಗೋಡು ಪ್ಯಾಕೇಜ್ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಆಂಫಿ ಥಿಯೇಟರ್, ಫೂಟ್‍ಪಾತ್, ಆಹಾರ ವಿತರಣಾ ಕೇಂದ್ರ, ಪಾರ್ಕಿಂಗ್ ವ್ಯವಸ್ಥೆಯಿರಲಿದೆ. ಇದರೊಂದಿಗೆ ಏಳು ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಲಿದೆ. ಕಾಮಗಾರಿಗಳ ಅಭಿವೃದ್ಧಿ ಬಗ್ಗೆ ಶಾಸಕ ಇ.ಚಂದ್ರಶೇಖರನ್, ನಗರಸಭಾಧ್ಯಕ್ಷೆ ಕೆ.ವಿ ಸುಜಾತಾ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ ರಾಜ್‍ಮೋಹನ್ ಅವಲೋಕನ ನಡೆಸಿದರು.
ಕಾಮಗಾರಿ ಪೂರ್ತಿಗೊಳ್ಳುವ ಮೂಲಕ ಜಿಲ್ಲೆಯ ಎರಡನೇ ಅತಿದೊಡ್ಡ ನಗರವಾಗಿರುವ ಕಾಞಂಗಾಡಿನ ಮುಖಚ್ಛಾಯೆ ಬದಲಾಗಲಿದ್ದು, ಪಾರಂಪರಿಕ ಆಶಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಆಧುನಿಕ ರೀತಿಯಲ್ಲಿ ಕಾಮಗಾರಿಗಳನ್ನು ಪೂರ್ತಿಗೊಳಿಸಲಾಗುವುದು ಎಂದು ನಗರಸಭಾಧ್ಯಕ್ಷೆ ಕೆ.ವಿ ಸುಜಾತಾ ತಿಳಿಸಿದ್ದಾರೆ.