ಹೈದರಾಬಾದ್: ತೆಲಂಗಾಣದ ಹುಝೂರಾಬಾದ್ ವಿಧಾನಸಭಾ ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಮತದಾರರು ವಿಶೇಷವಾಗಿ ಮಹಿಳೆಯರು, ಶನಿವಾರದ ಉಪಚುನಾವಣೆಯ ಮೊದಲು ತಮ್ಮ 'ಅಮೂಲ್ಯ' ಮತಕ್ಕೆ ನಗದು ನೀಡುವಂತೆ ಬಹಿರಂಗವಾಗಿ ಒತ್ತಾಯಿಸಿ ಧರಣಿ ನಡೆಸಿದರು ಎಂದು Times of India ವರದಿ ಮಾಡಿದೆ.
ಇದು ತಮ್ಮ ಹಕ್ಕು ಎಂದಿರುವ ಗ್ರಾಮಸ್ಥರು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ರಾಜಕಾರಣಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಎಲ್ಲ ಪಕ್ಷಗಳು ಚುನಾವಣೆಯಲ್ಲಿ ಕೊನೆಯ ಗಳಿಗೆಯಲ್ಲಿ ಖರ್ಚು ಮಾಡಿ ಸಾಧ್ಯವಾದಷ್ಟು ಮತಗಳನ್ನು ಕೊಳ್ಳಲು ಯತ್ನಿಸುತ್ತಿವೆ ಎಂಬ ಬಹಿರಂಗ ರಹಸ್ಯವನ್ನು ಬಯಲಿಗೆಳೆದರು.
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಹಾಲಿ ಶಾಸಕ ಮತ್ತು ಮಾಜಿ ಆರೋಗ್ಯ ಸಚಿವ ಈಟಾಲ ರಾಜೇಂದರ್ ಸ್ಥಾನಕ್ಕೆ ಹಾಗೂ ಟಿಆರ್‌ಎಸ್‌ಗೆ ರಾಜೀನಾಮೆ ನೀಡಿದ ನಂತರ ಹುಝೂರಾಬಾದ್‌ನಲ್ಲಿ ಉಪಚುನಾವಣೆ ಘೋಷಿಸಲಾಯಿತು.
ಕೆಲವು ರಾಜಕೀಯ ಪಕ್ಷಗಳು ಇತರ ಗ್ರಾಮಗಳಲ್ಲಿ ಮತದಾರರಿಗೆ ಲಕೋಟೆಗಳನ್ನು ಹಸ್ತಾಂತರಿಸಿದಾಗತಮಗೆ ನಗದು ನೀಡಲಾಗಿಲ್ಲ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ. ಸಿಟ್ಟಿಗೆದ್ದ ಮಹಿಳೆಯರು ವೀಣವಂಕ ಮಂಡಲದ ಗ್ರಾಮದ ಸರಪಂಚ್‌ನ ಮನೆ ಮುಂದೆ ಧರಣಿ ಕೂತು ತಮಗೂ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಕೆಲ ಪಕ್ಷಗಳು ಹಣ ಹಂಚುತ್ತಿದ್ದಾರೆ ಎಂಬ ಸುದ್ದಿ ಹರಡಿದ ತಕ್ಷಣ ರಂಗಾಪುರ, ಕಾಟ್ರಪಳ್ಳಿ, ಪೆದ್ದಪಾಪಯ್ಯ ಪಲ್ಲೆ ಗ್ರಾಮಗಳಲ್ಲಿ ಮತದಾರರು ಸಾಲುಗಟ್ಟಿ ನಿಂತಿದ್ದರು. ಗ್ರಾಮ ಕೇಂದ್ರಗಳಲ್ಲಿ ಕುಳಿತು ಧರಣಿ ನಡೆಸಿದರು.
ಕೆಲವರು ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಹುಝೂರಾಬಾದ್ ಕ್ಷೇತ್ರದ ಎಲ್ಲಾ ಐದು ಮಂಡಲಗಳು ಮತ್ತು ಎರಡು ಪುರಸಭೆಗಳ ಅನೇಕ ಗ್ರಾಮಗಳಲ್ಲಿ ಇದೇ ರೀತಿಯ ಧರಣಿಗಳು ನಡೆದವು. ಅವರನ್ನು ಬಿಡುವಂತೆ ಮನವೊಲಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
'ಒಂದು ಪಕ್ಷಕ್ಕೆ ಸೇರಿದ ನಾಯಕರು ಪ್ರತಿ ಮತಕ್ಕೂ ಕೆಲವರಿಗೆ ಹಣ ನೀಡಿದರು. ಆದರೆ ನಾವು ಹಣವನ್ನು ಪಡೆದಿಲ್ಲ. ನಾವೂ ಹಳ್ಳಿಯ ಮತದಾರರೇ' ಎಂದು ಮಹಿಳೆಯೊಬ್ಬರು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ. ಮತ್ತೊಬ್ಬರು ತಮ್ಮ ಮನೆಯಲ್ಲಿ ಮೂವರು ಮತದಾರರಿದ್ದಾರೆ. ಆದರೆ ಅವರು ಕೇವಲ ಒಂದು ಮತಕ್ಕೆ ನಗದು ನೀಡಿದರು ಎಂದು ಹೇಳುವುದು ಕೇಳಿಬಂದಿದೆ.
ಹಣಕ್ಕೆ ಬೇಡಿಕೆಯಿಡುವ ಹಾಗೂ ಧರಣಿ ನಡೆಸುತ್ತಿರುವ ಮಹಿಳೆಯರ ವೀಡಿಯೊಗಳು ವೈರಲ್ ಆಗಿವೆ. ಮತ್ತೊಂದು ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ಹಣದ ವಿಚಾರವಾಗಿ ಸರಪಂಚ್ ಮತ್ತು ವಾರ್ಡ್ ಸದಸ್ಯರೊಂದಿಗೆ ಜಗಳವಾಡುತ್ತಿರುವುದು ಕಂಡುಬಂದಿದೆ.