ನವದೆಹಲಿ; ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಹಬ್ಬದ ಸಂದರ್ಭದಲ್ಲಿ ತರಕಾರಿಗಳ ದರದಲ್ಲಿ ಭಾರೀ ಏರಿಕೆಯಾಗಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ತರಕಾರಿಗಳ ಬೆಲೆ ಹೆಚ್ಚಾಗಿದೆ. ಅದರಲ್ಲೂ ಟೆಮೆಟೋ ಮತ್ತು ಈರುಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಈ ಮೂಲಕ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಿದೆ.
ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಏರಿಯಾಗಿದ್ದು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿಯೇ ತರಕಾರಿಗಳ ಬೆಲೆಯೂ ಏರಿಕೆಯಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇದರಿಂದ ಸಂಕಷ್ಟ ಎದುರಾಗಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ಬೆಲೆ 39 ರೂ.ಗಳಿಗೆ ಏರಿಕೆಯಾಗಿದೆ. ಟೊಮೆಟೋ ಬೆಲೆ 45 ರೂ. ಗಡಿ ದಾಟಿದೆ. ಹೋಲ್‌ಸೇಲ್ ವರ್ತಕರ ಪ್ರಕಾರ ಮುಂದಿನ ವಾರವೂ ಇದೇ ದರ ಮುಂದುವರೆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ದರಗಳು ಇನ್ನಷ್ಟು ಏರಿಕೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಗೆ ತರಕಾರಿ ಸಾಗಣೆಗೆ ಅಧಿಕ ವೆಚ್ಚವಾಗುತ್ತಿದೆ. ಮತ್ತೊಂದು ಕಡೆ ಮಳೆಯಿಂದಾಗಿ ಉತ್ಪನ್ನಗಳ ಕೊರತೆ ಸಹ ಉಂಟಾಗಿದೆ. ಆದ್ದರಿಂದ ಬೆಲೆಗಳು ಏರಿಕೆಯಾಗುತ್ತಿವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಎಷ್ಟು ಏರಿಕೆಯಾಗಿದೆ?; ಕಳೆದ ತಿಂಗಳು ದೇಶದ ವಿವಿಧ ರಾಜ್ಯಗಳಲ್ಲಿ ಕೆಜಿ ಈರುಳ್ಳಿ ಬೆಲೆ 28 ರೂ. ಇತ್ತು. ಅಕ್ಟೋಬರ್ 17ರ ಭಾನುವಾರ 39 ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷವೂ ಈರುಳ್ಳಿ ಬೆಲೆ 46 ರೂ. ಗಡಿ ದಾಟಿತ್ತು. ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ಕೆಲವು ಮೆಟ್ರೋ ನಗರದಲ್ಲಿ ಭಾನುವಾರ ಈರುಳ್ಳಿ 50 ರೂ.ಗೆ ಸಹ ಮಾರಾಟವಾಗಿದೆ.
ಸೆಪ್ಟೆಂಬರ್‌ನಲ್ಲಿ ಕೆಜಿಗೆ 27 ರೂ. ಇದ್ದ ಟೊಮೆಟೋ ಬೆಲೆ ಭಾನುವಾರ 45 ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ 41 ರೂ.ಗಳಿಗೆ ಬೆಲೆ ಏರಿಕೆಯಾಗಿತ್ತು. ಈ ಬಾರಿಯೂ ಅದೇ ದರಕ್ಕೆ ಮಾರಾಟವಾಗಬಹುದು ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.
"ಈರುಳ್ಳಿ, ಟೊಮೆಟೋ ಮತ್ತು ಆಲೂಗಡ್ಡೆಗಳ ಬೆಲೆ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ ಎಂದು ಗ್ರಾಹಕರ ವ್ಯವಹಾರಗಳ ಸಚಿವಾಲಯ ಭಾನುವಾರ ಹೇಳಿಕೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿಗಳ ಪರಿಣಾಮವಾಗಿ ಮಳೆಯಾಗುತ್ತಿದೆ. ಅಕ್ಟೋಬರ್ 22ರ ತನಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹಲಸೂರ- ಲಾತೂರ್ ನಡುವಿನ ಸಂಪರ್ಕ ಕಡಿತಗೊಂಡಿದ್ದು, ಪಪ್ಪಾಯ ಬೆಳೆಗೆ ಹಾನಿಯಾಗಿದೆ. ಬಸವಕಲ್ಯಾಣದಲ್ಲಿ 73 ಮಿ. ಮೀ. ಮಳೆಯಾಗಿದೆ. ನಾರಾಯಣಪುರದಲ್ಲಿ 68.5 ಮಿ. ಮೀ. ಮತ್ತು ಹಲಸೂರಿನಲ್ಲಿ 68.5 ಮಿ. ಮೀ. ಮಳೆ ದಾಖಲಾಗಿದೆ.