ನಿಜವಾದ ನಾಯಕ : ಗಾಂಧಿಯವರ ಮುಖ್ಯಗುಣ ಪಾರದರ್ಶಕತೆ. ಹೇಳಿದ್ದನ್ನೇ ಮಾಡುವುದು, ಮಾಡಿದ್ದನ್ನೇ ಹೇಳುವದು. ಈ ಒಂದು ವಿಶೇಷ ಗುಣದಿಂದಲೇ ಗಾಂಧಿ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಒಂದು ಸಣ್ಣ ಗುಂಪನ್ನು ಹತೋಟಿಯಲ್ಲಿ ಇಡುವುದು ಕಷ್ಟವಾಗಿರುವಾಗ, ಒಂದೇ ಒಂದು ಕರೆಯಿಂದ ಇಡೀ ದೇಶವನ್ನೇ ಸತ್ಯಾಗ್ರಹಕ್ಕೆ ಅಣಿಮಾಡುತ್ತಿದ್ದರು ಎಂಬ ಸತ್ಯ ಅವರ ನಾಯಕತ್ವ ಗುಣವನ್ನು ಬಿಂಬಿಸುತ್ತದೆ. ಯಶಸ್ವಿ ರಾಜಕೀಯ ನಾಯಕರಿಗಿರಬೇಕಾದ ಮುತ್ಸದ್ದಿತನ, ದೂರದೃಷ್ಟಿ ಅವರಲ್ಲಿತ್ತು.
ಗಾಂಧಿ ಶಿಕ್ಷಣಕ್ಕೆ ಹೆಚ್ಚಿನ ಪಾಮುಖ್ಯತೆ ಕೊಡುತ್ತಿದ್ದರು. ಶೀಲವಿಲ್ಲದ ಶಿಕ್ಷಣ ತಪ್ಪು ಎಂದು ಭಾವಿಸಿದ್ದರು. ಆದರೆ ನಾವು ಗಳು ಇಂದು ನಮ್ಮ ಶಿಕ್ಷಣರಂಗದಲ್ಲಿ, ಮಕ್ಕಳಿಗೆ ಬರೀ‘ಮಾಹಿತಿ’ಯನ್ನು ಕೊಡುತ್ತಿದ್ದೇವೆ. ಒಬ್ಬ ಆಂಗ್ಲ ಭಾಷೆಯ ಲೇಖಕನ ಪ್ರಕಾರ, Todays education is, information, information, information but no trasformation. ಗಾಂಧಿ ನಂಬಿದ್ದ ಜೀವನ ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ನಮಗೆ ಬೇಕಾಗಿದೆ. ಮನಃ ಪರಿವರ್ತನೆಯಾಗುವಂತಹ, ಎಲ್ಲ ಸಂದರ್ಭಗಳಲ್ಲಿ ಜೀವನವನ್ನು ಎದುರಿಸುವ ಧೈರ್ಯ ಕೊಡುವ ಶಿಕ್ಷಣ ನಮಗೆ ಬೇಕಾಗಿದೆ.
ನಿಯತ್ತು, ಪ್ರಾಮಾಣಿಕತೆ, ನೀತಿತತ್ವ, ಇಂದು ಸವಕಲು ನಾಣ್ಯಗಳಾಗಿವೆ. ‘ಎಲ್ಲರೂ ಇರುವುದು ಹಾಗೇರೀ..’ ಎಂದು ಗೊಣಗುತ್ತೇವೆ. ಶಿಕ್ಷಣದ ಜೊತೆಗೆ, ಮಕ್ಕಳಿಗೆ ವಿವಿಧ ರಂಗಗಳ ತರಬೇತಿ ಕೊಡುವುದು, ಸರ್ವಾಂಗೀಣ ಪ್ರಗತಿಯತ್ತ ಮಕ್ಕಳನ್ನು ಕೊಂಡೊಯ್ಯುವುದು ಅತ್ಯಗತ್ಯ ಎಂದು ಗಾಂಧಿ ನಂಬಿದ್ದರು. ಯಾವುದೇ ಶಾಲಾ ಕಾಲೇಜಿನಲ್ಲಿ ಆಟಕ್ಕೆ, ದೈಹಿಕ ಕಸರತ್ತಿಗೆ ಅವಕಾಶಗಳಿರಬೇಕು. ಮಕ್ಕಳ ಮನಸ್ಸು ಅರಳುವುದರ ಬಗ್ಗೆ ಶಿಕ್ಷಕರು ವಿಚಾರ ಮಾಡಬೇಕು ಎಂದು ಮನಶಾಸ್ತ್ರಜ್ಞರಂತೆ ಗಾಂಧಿ ಚಿಂತಿಸುತ್ತಿದ್ದರು. ಬಾಲ್ಯದಲ್ಲಿ ಬಿತ್ತಿದ ಮೌಲ್ಯಗಳು ದೊಡ್ಡವರಾದ ಮೇಲೆ ಅವರ ವ್ಯಕ್ತಿತ್ವ ಬೆಳೆಯಲು ಸಹಕಾರಿಯಾಗುತ್ತದೆ ಎಂಬ ಅಂಶ ಅವರಿಗೆ ಗೊತ್ತಿತ್ತು.
ಹೀಗಾಗಿ ರಾಮರಾಜ್ಯದ ಪರಿಕಲ್ಪನೆಯನ್ನು ಕುರಿತು ಚಿಂತಿಸುತ್ತಿದ್ದರು. ಹಳ್ಳಿಗಳಿಗೆ ಅಧಿಕಾರ ಬಂದರೆ ಹಳ್ಳಿಯ ಜನ ತಮ್ಮ ಊರು, ಆರೋಗ್ಯ, ನೈರ್ಮಲ್ಯದ ಬಗೆಗೆ ತಾವೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹೀಗಾದಾಗ ಇಡೀ ದೇಶವೇ ರಾಮರಾಜ್ಯವಾಗಬಹುದೆಂದು ಅವರು ವಿಚಾರಮಾಡಿದ್ದರು. ಒಂದು ಹಳ್ಳಿಯಲ್ಲಿ ನಡೆಯಬಹುದಾದ ಕೈಗಾರಿಕೆ, ಅದಕ್ಕೆ ಕಚ್ಚಾಮಾಲಿನ ಪೂರೈಕೆ ಇವುಗಳ ಬಗ್ಗೆ ಸ್ಥಳೀಯ ನಾಗರಿಕರು ನಿರ್ಣಯ ತೆಗೆದುಕೊಳ್ಳಬೇಕೆಂದು ಅವರ ಕಲ್ಪನೆಯಾಗಿತ್ತು.
ಸತ್ಯವೇ ಉಸಿರು : ಗಾಂಧಿಯವರ, ಅಹಿಂಸೆ ಮತ್ತು ಸತ್ಯದ ಬೊಧನೆಗಳು ಜನಜನಿತ. ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ಸತ್ಯ ಮತ್ತು ಅಹಿಂಸೆಗಳು, ತಲೆತಲಾಂತರದಿಂದ ಬಂದ ನೀತಿಬೋಧನೆಗಳಾಗಿವೆ. ಅದರಲ್ಲಿ ನಾನು ಹೊಸದಾಗಿ ಹೇಳಿರುವುದು ಏನೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸತ್ಯ ಮತ್ತು ಅಹಿಂಸೆಗಳು, ಗಾಂಧಿಯವರ ಮುಖವಾಡ ಮಾತ್ರ ಆಗಿರಲಿಲ್ಲ. ಅವರು ಅದರಂತೆ ಬದುಕಿ ತೋರಿಸಿದ್ದರು. ಅದಕ್ಕೇ ತಮ್ಮ ಆತ್ಮಚರಿತ್ರೆಗೆ ಅವರು ‘ಸತ್ಯದೊಂದಿಗೆ ನನ್ನ ಪ್ರಯೋಗ’ ಎಂದು ಕರೆದರು. ಈ ಸತ್ಯ ಮತ್ತು ಅಹಿಂಸೆಯಾಂದಿಗೆ ತಮ್ಮ ಕೊನೆಯ ಉಸಿರಿರುವವರೆಗೆ ಪ್ರಯೋಗ ನಡೆಸಿದರು.
ನಾಡಿಮಿಡಿತ : ಗಾಂಧಿ ಭಾರತಕ್ಕೆ ಮರಳಿಬಂದಾಗ ಸ್ವಾತಂತ್ರ್ಯ ಸಂಗ್ರಾಮ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಹೋರಾಟದ ವೇದಿಕೆ ಸಿದ್ಧವಾಗಿತ್ತು. ಆಫ್ರಿಕಾದಲ್ಲಿ ಕಲಿತುಬಂದದ್ದನ್ನೇ ಇಲ್ಲಿ ಪ್ರಯೋಗಿಸಿದ ಗಾಂಧಿ, ಅದರಲ್ಲಿ ಯಶಸ್ವಿಯಾದರು. ಗಾಂಧಿಯವರ ಕರ್ಮದ ಬಗೆಗಿನ ಚಿಂತನೆಯೂ ಉನ್ನತವಾಗಿತ್ತು. ಯಾವಾಗಲೂ ಕೆಲಸ ಮಾಡುತ್ತಲೇ ಇರುತ್ತಿದ್ದ ಅವರು, ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳುವದರ ಮಹತ್ವವನ್ನು ಕುರಿತು ಹೇಳುತ್ತಿದ್ದರು. ಅವರು ವಿಚಾರ ವಿನಿಮಯ ಮಾಡುತ್ತಿರಲಿ ಅಥವಾ ಬಿಡುವಾಗಿರಲಿ ಸದಾ ಚರಕದ ಮುಂದೆ ಕುಳಿತು ನೇಯುತ್ತಿದ್ದರು. ಚರಕ ಮತ್ತು ಖಾದಿ ಅವರಿಗೆ ಸ್ವಾವಲಂಬನೆಯ ಸಂಕೇತವಾಗಿತ್ತು. ಆದರೆ ಖಾದಿಯನ್ನು ಇವತ್ತು ನಾವು ಯಾವ ಮಟ್ಟಕ್ಕೆ ಇಳಿಸಿದ್ದೇವೆ ಎಂದು ಎಲ್ಲರಿಗೂ ಗೊತ್ತು. ಹಿಂದೂ ಧರ್ಮದ ಮುಖ್ಯ ಗ್ರಂಥವಾದ ಭಗವದ್ಗೀತೆ, ಪ್ರಾರ್ಥನೆಯ ಮೂಲಕ ಆಧ್ಯಾತ್ಮಿಕವಾಗಿ ಉನ್ನತ ಮಟ್ಟ ತಲುಪಿದ್ದರು. ಮಹಾ ಗ್ರಂಥ ಭಗವದ್ಗೀತೆಯ ಪ್ರಕಾರ, ಮರಣ ಕಾಲದಲ್ಲಿ ಪರಮ ಪ್ರಭುವಿನ ನಾಮಸ್ಮರಣೆಯನ್ನು ಮಾಡಬೇಕು. ಅದರಂತೆ ಗುಂಡೇಟು ಬಿದ್ದಾಗ ಗಾಂಧಿ ಬಾಯಿಂದ ಬಂದದ್ದು ‘ಹೇ ರಾಮ್’ಎನ್ನುವ ಪ್ರಾರ್ಥನೆ. ಅವರಿಗೆ ಆಶ್ರಮವು ದಿನಚರಿ ಯ ಒಂದು ಭಾಗವಾಗಿತ್ತು. ಗುಂಪಾಗಿ ಪ್ರಾರ್ಥನೆ ಮಾಡುವುದರ ಪ್ರಯೋಜನವನ್ನು ಅವರು ಅರಿತಿದ್ದರು. ಉಪವಾ ಸ ಮತ್ತು ಪ್ರಾರ್ಥನೆಯಿಂದ ಮನಸ್ಸು ಸ್ವಚ್ಛವಾಗುತ್ತದೆ ಎನ್ನುವುದು ಗಾಂಧಿಗೆ ತಿಳಿದಿತ್ತು. ಆತ್ಮದ ಪರಿಶೋಧನೆಯ ಮಹತ್ವವನ್ನು ಅವರು ಅರಿತಿದ್ದರು. ‘ಮನಸ್ಸಿನಲ್ಲಿ ಗೊಂದಲವುಂಟಾದಾಗ, ಇನ್ನೇನೂ ಹೊಳೆ ಯದೇ ಇದ್ದಾಗ, ಮನಸ್ಸು ಮುದುಡಿದಾಗ ನಾನು ಭಗವದ್ಗೀತೆಯ ಬಳಿಗೆ ಹೋಗುತ್ತೇನೆ. ಅದು ತಾಯಿಯಂತೆ, ಗುರು ವಂತೆ, ಬಂಧುವಂತೆ ನನಗೆ ದಾರಿದೀಪವಾಗುತ್ತದೆ’ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ಅಪಾಯದ ಹಾದಿ : ಗಾಂಧಿ ಸರಳತೆ ಇಂದು ಹಾಸ್ಯಾಸ್ಪದ ವಿಷಯವಾಗಿದೆ. ಉದಾತ್ತ ಚಿಂತನೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಇದೆಯೆ ಹೊರತು, ಆಡಂಬರದ ಜೀವನದಲ್ಲಿ ಅಲ್ಲ ಎಂದು ಅವರು ಪ್ರತಿಪಾದಿಸುತ್ತಿದ್ದರು. ನಿಜ, ಗಾಂಧಿಯವರದು ನೂರಕ್ಕೆ ನೂರರಷ್ಟು ಆದರ್ಶಮಯ ಬದುಕು. ಅವರ ಎತ್ತರಕ್ಕೆ ಮುಟ್ಟಲಾಗುವುದಿಲ್ಲ. ಆದರೆ ಅವರ ಕಲ್ಪನೆಗಳಾದ ಸತ್ಯ, ಅಹಿಂಸೆ ಮತ್ತು ಕರ್ಮವನ್ನು ಕುರಿತು ಚಿಂತಿಸಿದರೆ ಆಗುವ ಪ್ರಯೋಜನಗಳು ಹಲವಾರು. ಗಾಂಧಿಯವರು ಹೇಳಿದ ಸ್ವಕರ್ಮ ಮತ್ತು ಸ್ವಾವಲಂಬನೆಯನ್ನ್ನು ಅನುಷ್ಠಾನಕ್ಕೆ ತಂದರೆ, ದೇಶ ರಾಮರಾಜ್ಯವಾಗುತ್ತದೆ. ನನಗೆ ವಹಿಸಿದ ಕಾರ್ಯವನ್ನು ಚಾಚೂ ತಪ್ಪದೇ ಮಾಡುತ್ತೇನೆ ಎಂಬ ಭಾವ ಎಲ್ಲರ ಮನದಲ್ಲಿ ಬಂದರೆ ಎಲ್ಲರ ಬಾಳೂ ಹಸನಾದೀತು. ಗಾಂಧಿಯವರ ಮೌಲ್ಯಗಳು ಯಾವತ್ತೂ ಅಳಿಯುವದಿಲ್ಲ, ಹಳೆಯದಾಗುವದಿಲ್ಲ. ನಮ್ಮ ದೇಶಕ್ಕೆ ಅವರ ಮೌಲ್ಯಗಳ ಅವಶ್ಯಕತೆ ಎಂದೆಂದೂ ಇದೆ. ಕರ್ಮ ಎಂಬ ಒಂದೇ ತಳಹದಿಯ ಮೇಲೆ ಅನೇಕ ರಾಷ್ಟ್ರಗಳು ಅಭಿವೃದ್ಧಿ ಹೊಂದಿರುವದನ್ನು ನಾವು ಕಂಡಿದ್ದೇವೆ. ಬಾಪುವಿನ ಉದಾತ್ತ ಚಿಂತನೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಮನನ ಮಾಡಿಸುವ ಕಾರ್ಯ ತುರ್ತಾಗಿ ಆಗಬೇಕಾಗಿದೆ.