ತಿರುವನಂತಪುರಂ: ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಸ್ ಚಕ್ರಕ್ಕೆ ಸಿಲಿಕಿದ್ದ ತಂದೆ, ಮಗನನ್ನು ಕಂಡಕ್ಟರ್ ರಕ್ಷಿಸಿದ್ದಾರೆ. ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಹಲವು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಬೆಟ್ಟದ ಮೇಲ್ಭಾಗದ ರಸ್ತೆಯಲ್ಲಿ ಮಣ್ಣು ಮಿಶ್ರಿತ ನೀರು ಧಾರಾಕಾರವಾಗಿ ಹರಿದು ಹೋಗುತ್ತಿದ್ದಾಗ ತಂದೆ, ಮಗ ತಮ್ಮ ಜೀವವನ್ನು ಉಳಿಸಿಕೊಳ್ಳಲು ಬಸ್ ಚಕ್ರವನ್ನು ಹಿಡಿದುಕೊಂಡು ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಈ ವೇಳೆ ಎಚ್ಚೆತ್ತುಕೊಂಡ ಕಂಡಕ್ಟರ್ ತಂದೆ, ಮಗನನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆ ಕೇರಳದಲ್ಲಿ ಸುರಿದ ಭಾರೀ ಮಳೆಯ ಚಿತ್ರಣಕ್ಕೆ ಸಾಕ್ಷಿಯಾಗಿದೆ.
ಜೈಸನ್ ಜೋಸಫ್ ಎಂಬ ಕಂಡಕ್ಟರ್ ಮಗು ಮತ್ತು ಆತನ ತಂದೆಯನ್ನು ರಕ್ಷಣೆ ಮಾಡಿದ್ದು, ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಜೋರಾದ ಮಳೆಯ ಕಾರಣ ಬಸ್ ಸಂಚಾರ ಸ್ಥಗಿತಗೊಂಡಿತ್ತು, ಆಗ ವ್ಯಕ್ತಿ ಮತ್ತು ಮಗುವನ್ನು ಕೆಸರಿನಿಂದ ಮುಚ್ಚಿ ಹೋಗಿದ್ದ ಬಸ್ ಟೈರ್‌ಗೆ ಸಿಲುಕಿದ್ದರು, ಬಸ್ ಟೈಯರ್ ಹಿಡಿದು ರಕ್ಷಣೆಗಾಗಿ ಬೇಡಿಕೊಳ್ಳುತ್ತಿದ್ದರು. ಆಗ ಜೈಸನ್ ಜೋಸೆಫ್ ಸಿಲುಕಿಕೊಂಡವರ ರಕ್ಷಣೆಗೆ ಮುಂದಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೈಸನ್ ಜೀವದ ಹಂಗು ತೊರೆದು ಬಸ್ಸಿನಿಂದ ಇಳಿದು ತಂದೆ, ಮಗುವನ್ನು ರಕ್ಷಣೆ ಮಾಡಿದ್ದಾರೆ. ಚಕ್ರಕ್ಕೆ ಸಿಲುಕಿದವರು ಗುಜರಾತ್‌ನ ಪ್ರವಾಸಿಗರು ಎಂದು ಗುರುತಿಸಲಾಗಿದೆ. ವ್ಯಕ್ತಿಯ ಪತ್ನಿ ಕಾರಿನ ಬಳಿ ಸಿಲುಕಿಕೊಂಡಿದ್ದರು ಮತ್ತು ನೀರಿನ ಮಟ್ಟ ಹೆಚ್ಚಾದಂತೆ ಅವರು ಹೊರಡಲು ಪ್ರಯತ್ನಿಸಿದ್ದರು. ಆಗ ಕೊಚ್ಚಿಕೊಂಡು ಹೋಗಿ ಬಸ್ ಚಕ್ರಕ್ಕೆ ಸಿಲುಕಿದ್ದರು.
ಬಸ್ ಕಂಡಕ್ಟರ್ ಜೈಸನ್ ಜೋಸೆಫ್ ಸಮಯಕ್ಕೆ ಸರಿಯಾಗಿ ಅವರನ್ನು ರಕ್ಷಣೆ ಮಾಡಿದರು. ಇಬ್ಬರನ್ನು ರಕ್ಷಣೆ ಮಾಡಿದ ಬಳಿಕ ಬಸ್ಸಿನ ಒಳಗೆ ಕರೆತರಲಾಗಿದೆ. ಕೆಸರು ನೀರಿನಲ್ಲಿ ಸಿಲುಕಿದ್ದ ಅವರ ತಲೆಯಿಂದ ಪಾದದವರೆಗೆ ಮಣ್ಣು ಮೆತ್ತಿಕೊಂಡಿರುವುದನ್ನು ವಿಡಿಯೋ ಕಾಣ ಬಹುದಾಗಿದೆ. ಬಲವಾದ ನೀರಿನ ಹರಿವಿನಿಂದಾಗಿ ಅವನು ಕಾರಿನ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ. ಜೈಸನ್ ಇತರರನ್ನು ಸರಿಯಾದ ಸಮಯಕ್ಕೆ ಎಚ್ಚರಿಸಿದ್ದು, ಕಾರಿನ ಬಳಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ.
ಕೇರಳ ಮಹಾಮಳೆಗೆ ಜನ ಜೀವನ ಅಸ್ತವ್ಯಸ್ತ
ಕಳೆದ ಶುಕ್ರವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಜಲಾನಯನ ಪ್ರದೇಶಗಳು, ಕೇರಳದ ಪೂರ್ವ ಗುಡ್ಡಗಾಡು ಪ್ರದೇಶಗಳಲ್ಲಿನ ಅಣೆಕಟ್ಟುಗಳು ಮತ್ತು ನದಿಗಳಲ್ಲಿ ನೀರಿನ ಮಟ್ಟವು ಏರಿಕೆಯಾಗಿದೆ. ಇದರಿಂದಾಗಿ ರಸ್ತೆಗಳು ನದಿಯಾಗಿ ಮಾರ್ಪಟ್ಟಿವೆ. ಭೂಕುಸಿತ ಮತ್ತು ದಿಢೀರ್ ನೀರಿನ ಹರಿವಿನಿಂದಾಗಿ ಪ್ರವಾಹ ಉಂಟಾಗಿದೆ. ವಾರಾಂತ್ಯದಲ್ಲಿ ಸುರಿದ ಮಳೆಯಿಂದಾಗಿ 15 ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಏಷ್ಯಾದ ಅತಿ ಎತ್ತರದ ಕಮಾನು ಅಣೆಕಟ್ಟುಗಳಲ್ಲಿ ಒಂದಾದ ಇಡುಕ್ಕಿ ಜಲಾಶಯದ ನೀರಿನ ಮಟ್ಟವು ಸೋಮವಾರ 2,396.96 ಅಡಿಗಳಿಗೆ ಏರಿದೆ.
ನದಿ ತೀರದ ಗ್ರಾಮದ ಜನರಿಗೆ ಪ್ರವಾಹದ ಭೀತಿ
ಮೀನಾಚಲ ಮತ್ತು ಮನಿಮಾಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗುತ್ತಿದೆ. ತೀವ್ರ ಪ್ರವಾಹ ಉಂಟಾದ ಸ್ಥಳಗಳಲ್ಲಿ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಭೂ ಕುಸಿತ ಮತ್ತು ಪ್ರವಾಹದಿಂದಾಗಿ ಪರ್ವತ ಪ್ರದೇಶದ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಎರಡು ಅಂತಸ್ತಿನ ಬೃಹತ್ ಕಟ್ಟಡ ಧರೆಗೆ ಉರುಳುತ್ತಿರುವ ದೃಶ್ಯಗಳ ವಿಡಿಯೋ ವೈರಲ್ ಆಗಿದೆ. ನದಿಗಳು ತುಂಬಿ ಹರಿಯತ್ತಿರುವುದು, ಜನರು ಸಂಕಷ್ಟಕ್ಕೆ ಸಿಲುಕಿರುವ, ರಸ್ತೆ ಸಂಪರ್ಕ ಕಡಿತಗೊಂಡಿರುವ ಮತ್ತು ರಕ್ಷಣಾ ಕಾರ್ಯದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಹ ನೀಡಲಾಗಿದೆ.
11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಭಾರತೀಯ ಹವಾಮಾನ ಇಲಾಖೆ ತಿರುವನಂತರಪುರಂ, ಕೊಲ್ಲಂ, ಪಟಾನಮಿಥಟ್ಟಾ, ಕೊಟ್ಟಾಯಂ, ಅಲ್ಲಪುಜಾ, ಎರ್ನಾಕುಲಂ, ಇಡುಕ್ಕಿ, ತ್ರಿಶ್ಯೂರ್, ಪಾಲಕ್ಕಾಡ, ಮಲಪ್ಪುರಂ ಮತ್ತು ಕೊಯಿಕೊಡ್ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಸೋಮವಾರ ದೆಹಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿದೆ. ಉತ್ತರಾಖಂಡ, ಈಶಾನ್ಯ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಮಳೆಯಾಗಲಿದ್ದು, ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಹೆಚ್ಚಿನ ರಕ್ಷಣಾ ಪಡೆ ನಿಯೋಜನೆ
ಇಂಜಿನಿಯರಿಂಗ್ ಮತ್ತು ಮೆಡಿಕಲ್ ಯುನಿಟ್ ಜೊತೆ ಸೈನಿಕರು ಕಣ್ಣೂರುನಿಂದ ವಯನಾಡು ತಲುಪಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರಿನ ಇಂಜಿಯರಿಂಗ್ ಟಾಸ್ಕ್ ಫೋರ್ಸ್ ತಂಡ ಶೀಘ್ರದಲ್ಲಿಯೇ ವಯನಾಡು ತಲುಪಲಿದೆ. ಸೇನೆಯ ಮೂರು ತುಕಡಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ವಾಯುಸೇನೆಯ ಹೆಲಿಕಾಪ್ಟರ್‌ಗಳ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ ಸಾಮಾಗ್ರಿ ಮತ್ತು ಔಷಧಿ ಕಳುಹಿಸಲಾಗುತ್ತಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.