ನವದೆಹಲಿ: ಒಬ್ಬ ವ್ಯಕ್ತಿಯನ್ನು ಒತ್ತಾಯವಾಗಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸುವುದು ಆತನ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದ್ದು, ಭಾರತೀಯ ಕಾನೂನು ಎಂದಿಗೂ ನ್ಯಾಯ ಸಮ್ಮತತೆಗೆ ಒಲವು ತೋರುತ್ತದೆ ಎಂದು ಪ್ರತಿಪಾದಿಸಿದೆ.
'ಫಿರ್ಯಾದಿ ತಾನು ಡಿಎನ್‌ಎ ಪರೀಕ್ಷೆಗೆ ಒಳಪಡಲು ಇಷ್ಟ ಪಡದಿದ್ದಾಗ ಆತನನ್ನು ಪರೀಕ್ಷೆಗೆ ಒತ್ತಾಯಿಸಿದರೆ ಆತನ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಖಾಸಗೀತನಕ್ಕೆ ಧಕ್ಕೆ ತಂದಂತೆ ಆಗುತ್ತದೆ' ಎಂದು ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಹಾಗೂ ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠವು ಹೇಳಿದೆ.
ಡಿಎನ್‌ಎ ಪರೀಕ್ಷೆಯ ಅವಶ್ಯಕತೆ ಎರಡೂ ಕಡೆಗಳ ಹಿತಾಸಕ್ತಿಗಳನ್ನು ಒಳಗೊಂಡಿರಬೇಕು. ಸತ್ಯದ ಅನ್ವೇಷಣೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಣಾಮಗಳ ಆಧಾರದ ಮೇಲಷ್ಟೇ ಪರೀಕ್ಷೆ ಕುರಿತು ನ್ಯಾಯಾಲಯ ನಿರ್ಧಾರ ಮಾಡಬೇಕಾಗುತ್ತದೆ ಎಂದು ಪೀಠ ತಿಳಿಸಿದೆ.
ಯಾವುದೇ ಸಂಬಂಧವನ್ನು ಸಾಕ್ಷೀಕರಿಸಲು ಅಥವಾ ವಿವಾದದ ಬಗ್ಗೆ ತಿಳಿಯಲು ಇತರೆ ಪುರಾವೆಗಳು ಲಭ್ಯವಿರುವ ಸಂದರ್ಭದಲ್ಲಿ ನ್ಯಾಯಾಲಯ ಈ ರಕ್ತ ಪರೀಕ್ಷೆಗೆ ಆದೇಶಿಸುವುದರಿಂದ ಹಿಂದೆ ಉಳಿಯಬೇಕು ಎಂದು ಪೀಠ ಉಲ್ಲೇಖಿಸಿದೆ.
'ಇಂಥ ಪರೀಕ್ಷೆಗಳು ವ್ಯಕ್ತಿಯ ಗೌಪ್ಯತೆಯ ಹಕ್ಕಿಗೆ ಚ್ಯುತಿ ಉಂಟು ಮಾಡುತ್ತವೆ. ಇದರೊಂದಿಗೆ ಸಾಮಾಜಿಕ ಪರಿಣಾಮಗಳನ್ನು ಕೂಡ ಉಂಟುಮಾಡಬಹುದು. ಭಾರತೀಯ ಕಾನೂನು ನ್ಯಾಯಸಮ್ಮತತೆಗೆ ಒತ್ತು ನೀಡುತ್ತದೆ ಎಂಬುದನ್ನು ನ್ಯಾಯಾಲಯ ಗಮನದಲ್ಲಿಟ್ಟುಕೊಳ್ಳಬೇಕು' ಎಂದು ತೀರ್ಪಿನಲ್ಲಿ ಹೇಳಿದೆ. ಈ ವಿಷಯವನ್ನು ಲಘುವಾಗಿ ನೋಡಲು ಸಾಧ್ಯವಿಲ್ಲ ಎಂದೂ ಹೇಳಿದೆ.
ಡಿಎನ್‌ಎ ಒಬ್ಬ ವ್ಯಕ್ತಿಯ ಗುರುತಾಗಿದೆ (ಅವಳಿಗಳನ್ನು ಹೊರತುಪಡಿಸಿ). ವ್ಯಕ್ತಿಯ ಗುರುತು ಪತ್ತೆಗೆ, ಕೌಟುಂಬಿಕ ಸಂಬಂಧಗಳ ಪತ್ತೆಗೆ ಅಥವಾ ಸೂಕ್ಷ್ಮ ಆರೋಗ್ಯ ಮಾಹಿತಿಯನ್ನು ಕಂಡುಕೊಳ್ಳಲು ಈ ಪರೀಕ್ಷೆಯನ್ನು ಬಳಸಲಾಗುತ್ತದೆ. ಆದರೆ ಈ ಪರೀಕ್ಷೆಯನ್ನು ವ್ಯಕ್ತಿಯ ಇಚ್ಛೆಯ ವಿರುದ್ಧವಾಗಿ ನಡೆಸುವುದರಿಂದ ಆ ವ್ಯಕ್ತಿಯನ್ನು ಅಪರಾಧಿ ಎಂಬಂತೆ ಕಳಂಕಗೊಳಿಸುವ ಸಾಧ್ಯತೆಯಿದೆ. ಇದರೊಂದಿಗೆ, ಎಷ್ಟೋ ಮಕ್ಕಳಿಗೆ ತಮ್ಮ ಪ್ರೌಢಾವಸ್ಥೆಯಲ್ಲಿ, ತಮ್ಮ ಪೋಷಕರಿಗೆ ತಾವು ನಿಜವಾದ ಮಕ್ಕಳಲ್ಲ ಎಂದು ತಿಳಿಯುವುದು ಕೂಡ ಭಾರೀ ಪೆಟ್ಟು ನೀಡಿದಂತಾಗುತ್ತದೆ. ಅವರ ಖಾಸಗೀತನದ ಹಕ್ಕಿಗೂ ಧಕ್ಕೆ ತರುತ್ತದೆ' ಎಂದು ಪೀಠ ಪುನರುಚ್ಚರಿಸಿದೆ.
ಈ ಅವಲೋಕನಗಳನ್ನು ಉನ್ನತ ನ್ಯಾಯಾಲಯ ಮಾಡಿದ್ದು, ಫಿರ್ಯಾದಿಯನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲು ನಿರ್ದೇಶನ ನೀಡಿದ್ದ ಹೈಕೋರ್ಟ್ ತೀರ್ಪನ್ನು ಬದಿಗಿರಿಸಿದೆ.
ತ್ರಿಲೋಕ್ ಚಂದ್ರ ಗುಪ್ತಾ ಹಾಗೂ ಸೋನಾ ದೇವಿ ಎಂಬುವರು ಬಿಟ್ಟು ಹೋದ ಆಸ್ತಿಯ ಮಾಲೀಕತ್ವ ಘೋಷಿಸುವ ಸಂಬಂಧ ದಾವೆ ಹೂಡಲಾಗಿದ್ದು, ಇವರಿಬ್ಬರ ಮಗನೆಂದು ಫಿರ್ಯಾದಿ ಹೇಳಿಕೊಂಡಿದ್ದಾನೆ. ಆದರೆ ಈ ದಂಪತಿ ಹೆಣ್ಣು ಮಕ್ಕಳು ಪ್ರತಿವಾದಿಯಾಗಿದ್ದು, ಆತ ತಮ್ಮ ತಂದೆ ತಾಯಿಯ ಮಗನಲ್ಲ ಎಂದು ಆರೋಪಿಸಿದ್ದಾರೆ.
ಆತನಿಗೆ ತನ್ನ ಕುಟುಂಬದೊಂದಿಗೆ ಜೈವಿಕ ಸಂಬಂಧವನ್ನು ಸಾಬೀತುಪಡಿಸಲು ಆತ ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಆತ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ತನ್ನ ಹಕ್ಕು ಸ್ಥಾಪನೆಗೆ ಆತ ಸಾಕ್ಷ್ಯ ಸಲ್ಲಿಸಿದ್ದು, ಇದೀಗ ಉನ್ನತ ನ್ಯಾಯಾಲಯವು ಆತನನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಲಾಗದು ಎಂದು ತಿಳಿಸಿದೆ.
ಹೈಕೋರ್ಟ್ ಆತನನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಲು ಸೂಚಿಸಿತ್ತು. ಈ ನಿರ್ದೇಶನವನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂ ಕೋರ್ಟ್ ಆತನ ಅರ್ಜಿಯನ್ನು ಎತ್ತಿಹಿಡಿದಿದೆ. ಡಿಎನ್‌ಎ (ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ) ಪರೀಕ್ಷೆಯು ಆನುವಂಶಿಕ ಅಣು ಪರೀಕ್ಷೆಯಾಗಿದೆ. ಯಾವುದೇ ಬಲವಾದ ಕಾರಣವಿಲ್ಲದೇ ಒತ್ತಾಯಪೂರ್ವಕವಾಗಿ ವ್ಯಕ್ತಿಯ ಡಿಎನ್‌ಎ ಪರೀಕ್ಷೆ ಮಾಡಬಾರದು ಎಂದು ಸೂಚಿಸಿದೆ.