ನವದೆಹಲಿ: ಪ್ರತಿಷ್ಠಿತ ಐಐಟಿಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ ಅಡ್ವಾನ್ಸಡ್(JEE Advanced) 2021ರ ಫಲಿತಾಂಶವು ನಿನ್ನೆ ಹೊರಬಿದ್ದಿದೆ. ರಾಜಸ್ಥಾನದ ಜೈಪುರ ಮೂಲದ 18 ವರ್ಷದ ಮೃದುಲ್ ಅಗರ್ವಾಲ್, ಈವರೆಗೆ ಅತಿಹೆಚ್ಚು ಅಂಕಗಳನ್ನು ಗಳಿಸಿ ಇತಿಹಾಸ ರಚಿಸಿದ್ದಾನೆ. ದೆಹಲಿಯ ಕಾವ್ಯ ಚೋಪ್ರ ಎಂಬ ವಿದ್ಯಾರ್ಥಿನಿಯು ಬಾಲಕಿಯರಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದಾಕೆ.
ಅರ್ಹತಾ ಪರೀಕ್ಷೆಯಾದ ಜೆಇಇ ಮೇಯ್ಸ್ನ ಮಾರ್ಚ್ ಸುತ್ತಿನಲ್ಲಿ 100 ಪರ್ಸೆಂಟೈಲ್ ಗಳಿಸಿ, ದೆಹಲಿ ಐಐಟಿ ವಲಯದಿಂದ ಜೆಇಇ ಅಡ್ವಾನ್ಸಡ್ ಪರೀಕ್ಷೆ ಬರೆದಿದ್ದ ಮೃದುಲ್ ಅಗರ್ವಾಲ್, 360 ಕ್ಕೆ 348 ಅಂಕಗಳನ್ನು ಗಳಿಸಿ ಪ್ರಥಮ ರಾಂಕ್ ಪಡೆದಿದ್ದಾನೆ. ಇದು ಶೇಕಡ 96.6 ಅಂಕವಾಗಿದ್ದು ಐಐಟಿ ಪ್ರವೇಶ ಪರೀಕ್ಷೆಗಳಲ್ಲಿ ಈವರೆಗೆ ಯಾವುದೇ ಅಭ್ಯರ್ಥಿ ಗಳಿಸಿರುವ ಅತಿಹೆಚ್ಚಿನ ಅಂಕವಾಗಿದೆ ಎನ್ನಲಾಗಿದೆ.
ನಿನ್ನೆ ಹೊರಬಿದ್ದ ಫಲಿತಾಂಶದ ಪ್ರಕಾರ, ಜೆಇಇ (ಅಡ್ವಾನ್ಸಡ್) 2021ರ ಎರಡೂ ಪತ್ರಿಕೆಗಳಿಗೆ ದೇಶದ ವಿವಿಧೆಡೆಗಳಿಂದ ಈ ಬಾರಿ ಒಟ್ಟು 1,41,699 ಅಭ್ಯರ್ಥಿಗಳು ಹಾಜರಾಗಿದ್ದರು. ಅವರಲ್ಲಿ 41,862 ಅಭ್ಯರ್ಥಿಗಳು ಅರ್ಹತೆ ಗಳಿಸಿದ್ದು, ಇವರಲ್ಲಿ 6,452 ವಿದ್ಯಾರ್ಥಿನಿಯರಿದ್ದಾರೆ. ಐಐಟಿ ದೆಹಲಿ ಜೋನ್ಗೆ ಸಲ್ಲುವ ಕಾವ್ಯ ಚೋಪ್ರ, 360ಕ್ಕೆ 286 ಅಂಕಗಳನ್ನು ಪಡೆದು 98ನೇ ಸ್ಥಾನ ಗಳಿಸಿದ್ದಾಳೆ; ವಿದ್ಯಾರ್ಥಿನಿಯರಲ್ಲಿ ಮೊದಲಿಗಳಾಗಿದ್ದಾಳೆ.