ವಾಷಿಂಗ್ಟನ್ : ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ರೋಗನಿರೋಧಕ ಶಕ್ತಿ ಅತಿ ಕಡಿಮೆ ಇರುವವರಿಗೆ ಹೆಚ್ಚುವರಿ ಲಸಿಕೆ ನೀಡಲು ವಿಶ್ವ ಆರೋಗ್ಯ ಸಂಸ್ಥೆಯ ಲಸಿಕಾ ಸಲಹೆಗಾರರು ಸೋಮವಾರ ಶಿಫಾರಸು ಮಾಡಿದ್ದಾರೆ.
ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ಸಮರ್ಥ ರೋಗನಿರೋಧಕ ಶಕ್ತಿ ಇಲ್ಲದವರಿಗೆ ಹೆಚ್ಚುವರಿ ಒಂದು ಡೋಸ್ ಕೊರೊನಾ ಲಸಿಕೆ ನೀಡಬಹುದು ಎಂದು WHO ತಿಳಿಸಿದೆ.
ಕೊರೊನಾ ಲಸಿಕೆ ಕಾರ್ಯತಂತ್ರ ಸಲಹಾ ಸಮಿತಿ ತಜ್ಞರು ಈ ಶಿಫಾರಸು ಮಾಡಿದ್ದಾರೆ. ಜೊತೆಗೆ ಚೀನಾದ ಸಿನೋವ್ಯಾಕ್ ಹಾಗೂ ಸಿನೋಫಾರ್ಮಾ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಪಡೆದಿದ್ದರೂ 60 ವರ್ಷ ಮೇಲ್ಪಟ್ಟವರಿಗೆ ಮೂರನೇ ಡೋಸ್ ಲಸಿಕೆ ನೀಡಬಹುದು ಎಂದು ತಿಳಿಸಿದೆ.
'ನಾವು ಬಹುಜನಸಂಖ್ಯೆಗೆ ಬೂಸ್ಟರ್ ಡೋಸ್- ಅಂದರೆ ಮೂರನೇ ಡೋಸ್ ನೀಡಲು ಶಿಫಾರಸು ಮಾಡುತ್ತಿಲ್ಲ' ಎಂದು ತಜ್ಞರು ಸ್ಪಷ್ಟನೆ ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಇಡೀ ವಿಶ್ವವನ್ನೇ ಆವರಿಸಿದ್ದ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹಲವು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಫೈಜರ್ ಬಯೋಎನ್‌ಟೆಕ್, ಜಾನ್‌ಸೆನ್, ಮಾಡೆರ್ನಾ, ಸಿನೋಫಾರ್ಮ್, ಸಿನೋವ್ಯಾಕ್, ಆಸ್ಟ್ರಾಜೆನೆಕಾ ಲಸಿಕೆಗಳಿಗೆ ಅನುಮೋದನೆ ನೀಡಿತ್ತು.
ಭಾರತದ, ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದನೆ ಪಡೆದ ಲಸಿಕೆಗಳ ಪಟ್ಟಿಗೆ ಸೇರಿಸುವ ಸಂಬಂಧ ಇನ್ನೂ ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರ ಹೊರಬೀಳಬೇಕಿದೆ.
ಈ ಲಸಿಕೆಗೆ ಅನುಮೋದನೆ ನೀಡುವ ಸಂಬಂಧ ಹಾಗೂ ಹೆಚ್ಚುವರಿ ಲಸಿಕೆ ನೀಡುವ ಕುರಿತು ಕಳೆದ ವಾರ ಚರ್ಚೆಯನ್ನೂ ನಡೆಸಲಾಗಿದೆ. ಈ ಸಂದರ್ಭ, ಮಧ್ಯಮ ಹಾಗೂ ತೀವ್ರತರವಾಗಿ ರೋಗನಿರೋಧಕ ಶಕ್ತಿ ಕೊರತೆ ಇದ್ದವರಲ್ಲಿ, ಸಮರ್ಥ ರೋಗನಿರೋಧಕ ಶಕ್ತಿ ಕಡಿಮೆಯಿದ್ದವರಿಗೆ, ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆಗೆ ಅನುಮೋದನೆ ನೀಡಿದ ಲಸಿಕೆಯ ಹೆಚ್ಚುವರಿ ಡೋಸ್ ನೀಡಬಹುದು ಎಂದು ಮಾಹಿತಿ ನೀಡಿದೆ.
ಈ ಶಿಫಾರಸುಗಳನ್ನು ಜಾರಿಗೆ ತರುವ ಮುನ್ನ ದೇಶಗಳು ಒಮ್ಮೆ ತಮ್ಮ ಜನಸಂಖ್ಯೆಯ ಎಷ್ಟು ಪ್ರತಿಶತ ಜನಕ್ಕೆ ಎರಡು ಡೋಸ್‌ಗಳನ್ನು ನೀಡಿ ಪೂರೈಸಲಾಗಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಆನಂತರ ಮೂರನೇ ಡೋಸ್ ನೀಡುವತ್ತ ಆಲೋಚಿಸಬೇಕು. ಅದರಲ್ಲೂ ಮೊದಲು ವಯಸ್ಸಾದವರಿಗೆ ಬೂಸ್ಟರ್ ಡೋಸ್ ನೀಡಲು ಆರಂಭಿಸಬೇಕು ಎಂದು ತಿಳಿಸಿದೆ.
ಮೊದಲಿನಿಂದಲೂ ವಿಶ್ವ ಆರೋಗ್ಯ ಸಂಸ್ಥೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಮುನ್ನ ಶ್ರೀಮಂತ ದೇಶಗಳು ಆಲೋಚಿಸಬೇಕು ಎಂದು ಹೇಳುತ್ತಾ ಬಂದಿತ್ತು. ಇನ್ನೂ ಎಷ್ಟೋ ಬಡದೇಶಗಳಲ್ಲಿ ಒಂದು ಡೋಸ್ ಲಸಿಕೆ ಪೂರೈಕೆಯೇ ಆಗಿಲ್ಲ. ಹೀಗಿರುವಾಗ ಶ್ರೀಮಂತ ರಾಷ್ಟ್ರಗಳು ಮೂರನೇ ಡೋಸ್ ನೀಡುವತ್ತ ಅವಸರ ಪಡಬಾರದು. ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮವನ್ನು ಈ ವರ್ಷದವರೆಗೂ ತಡೆ ಹಿಡಿಯಬೇಕು ಎಂದು ಕರೆ ನೀಡಿತ್ತು.
ಇದಾಗ್ಯೂ ಅಮೆರಿಕ ಸೇರಿದಂತೆ ಇಸ್ರೇಲ್, ಅರಬ್, ರಷ್ಯಾ, ಫ್ರಾನ್ಸ್, ಜರ್ಮನಿ ಹಾಗೂ ಇಟಲಿಯಂಥ ಹಲವು ದೇಶಗಳು ತಮ್ಮ ಜನತೆಗೆ ಸುರಕ್ಷತಾ ದೃಷ್ಟಿಯಿಂದ ಬೂಸ್ಟರ್ ಡೋಸ್ ಲಸಿಕೆ ನೀಡಲು ಆರಂಭಿಸಿವೆ. ಭಾರತದಲ್ಲಿಯೂ ಬೂಸ್ಟರ್ ಡೋಸ್ ಲಸಿಕೆ ನೀಡುವ ಸಂಬಂಧ ಚರ್ಚೆ ಸಾಗಿದೆ.
ಕೊರೊನಾ ಸೋಂಕಿನ ವಿರುದ್ಧ ಗರಿಷ್ಠ ರಕ್ಷಣೆ ಪಡೆಯಲು ಕೊರೊನಾ ಲಸಿಕೆಯ ಬೂಸ್ಟರ್ ಡೋಸ್‌ಗಳ ಅಗತ್ಯ ಶೀಘ್ರದಲ್ಲೇ ಕಂಡುಬರಬಹುದು ಎಂದು ಈಚೆಗೆ ಅಮೆರಿಕ ಅಗ್ರ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಆಂಥೋನಿ ಫೌಸಿ ಕೂಡ ಹೇಳಿದ್ದರು.
ರೋಗನಿರೋಧಕ ಶಕ್ತಿಯ ಕ್ಷೀಣತೆಯ ಆಧಾರದ ಮೇಲೆ ಕೊರೊನಾ ಮೂರನೇ ಲಸಿಕೆ, ಅಂದರೆ ಬೂಸ್ಟರ್ ಡೋಸ್ ನೀಡಲು ಬೆಂಬಲಿಸಬಹುದು. ಅಮೆರಿಕದ ಮಾಹಿತಿಗಳು ಹಾಗೂ ಇಸ್ರೇಲಿನಲ್ಲಿನ ಉದಾಹರಣೆಗಳನ್ನು ಗಮನಿಸಿ ಹಲವು ದೇಶಗಳು ಬೂಸ್ಟರ್ ಡೋಸ್ ನೀಡಬಹುದಾಗಿದೆ ಎಂದು ತಜ್ಞರು ಹೇಳಿದ್ದರು.