HEALTH TIPS

ಕೇಂದ್ರದ ನಿರ್ಧಾರದ ಬಳಿಕ ಬಿಜೆಪಿ ಆಡಳಿತದ 10 ರಾಜ್ಯಗಳಿಂದ ಪೆಟ್ರೋಲ್‌ ದರ ಇಳಿಕೆ

                ನವದೆಹಲಿ :ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತವಿರುವ 10 ರಾಜ್ಯಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸ್ಥಳೀಯ ತೆರಿಗೆಗಳನ್ನು ಕಡಿತಗೊಳಿಸಿವೆ. 2 ಬಿಜೆಪಿಯೇತರ ಪಕ್ಷಗಳ ರಾಜ್ಯ ಸರಕಾರಗಳೂ ದರ ಇಳಿಕೆ ಘೋಷಿಸಿವೆ.

             ಅಸ್ಸಾಂ, ತ್ರಿಪುರಾ, ಮಣಿಪುರ, ಕರ್ನಾಟಕ, ಗೋವಾ, ಉತ್ತರ ಪ್ರದೇಶ, ಗುಜರಾತ್‌, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಹೆಚ್ಚುವರಿ ದರ ಕಡಿತ ಘೋಷಿಸಲಾಗಿದೆ.

           ಕೇಂದ್ರ ಸರಕಾರ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ. ಹಾಗೂ ಪೆಟ್ರೋಲ್‌ ಮೇಲಿನ ಸುಂಕವನ್ನು 5 ರೂ.ಗೆ ಕಡಿತಗೊಳಿಸಿತ್ತು. ಹೆಚ್ಚುವರಿಯಾಗಿ ಬಿಜೆಪಿ ಆಡಳಿತ ಇರುವ ರಾಜ್ಯಗಳು 7 ರೂ. ತನಕ ದರ ಕಡಿತಗೊಳಿಸಿವೆ.
             ಅಸ್ಸಾಂ, ತ್ರಿಪುರಾ, ಮಣಿಪುರ, ಕರ್ನಾಟಕ ಮತ್ತು ಗೋವಾದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ರಾಜ್ಯ ಸರಕಾರಗಳು ತಲಾ 7 ರೂ. ಇಳಿಸಿವೆ. ಉತ್ತರಾಖಂಡ್‌ ಸರಕಾರ ಪೆಟ್ರೋಲ್‌ ಮೇಲಿನ ವ್ಯಾಟ್‌ನಲ್ಲಿ 2 ರೂ. ಇಳಿಕೆ ಘೋಷಿಸಿದೆ.
               ಹಲವಾರು ಸಂದರ್ಭಗಳಲ್ಲಿ ಎನ್‌ಡಿಎ ಬೆಂಬಲಿಸಿರುವ ಬಿಜು ಜನತಾದಳ ಪಕ್ಷದ ಆಡಳಿತ ಇರುವ ಒಡಿಶಾ ಸರಕಾರ ಕೂಡ ಪೆಟ್ರೋಲ್‌, ಡೀಸೆಲ್‌ ಮೇಲಿನ ವ್ಯಾಟ್‌ನಲ್ಲಿ 3 ರೂ. ಇಳಿಸಿದೆ. ಇದರಿಂದ ಒಡಿಶಾ ಸರಕಾರಕ್ಕೆ ವಾರ್ಷಿಕ 1,400 ಕೋಟಿ ರೂ. ನಷ್ಟವಾಗಲಿದೆ.
              ಸಂಯುಕ್ತ ಜನತಾ ದಳ (ಜೆಡಿಯು) ಮತ್ತು ಬಿಜೆಪಿ ಮೈತ್ರಿಕೂಟದ ಆಡಳಿತವಿರುವ ಬಿಹಾರದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲೆ ವ್ಯಾಟ್‌ನಲ್ಲಿ ತಲಾ 3 ರೂ. ಕಡಿತಗೊಳಿಸಲಾಗಿದೆ. ''ಕೇಂದ್ರ ಸರಕಾರ ಅಬಕಾರಿ ಸುಂಕ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಅನುಕೂಲ ಕಲ್ಪಿಸಲು ರಾಜ್ಯ ಸರಕಾರ ಸುಂಕ ಕಡಿತಗೊಳಿಸಿದೆ," ಎಂದು ಸಿಎಂ ನಿತೀಶ್‌ ಕುಮಾರ್‌ ತಿಳಿಸಿದ್ದಾರೆ.
              ಬಿಜೆಪಿ-ಕಾಂಗ್ರೆಸ್‌ ಆರೋಪ-ಪ್ರತ್ಯಾರೋಪ:

"ಕೇಂದ್ರ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಇಳಿಸಿದ ನಂತರ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯ ಸರಕಾರಗಳು ವ್ಯಾಟ್‌ ಅನ್ನು ಇಳಿಸಿವೆ. ಹೀಗಿದ್ದರೂ ಪ್ರತಿಪಕ್ಷ ಆಡಳಿತವಿರುವ ದಿಲ್ಲಿ, ಪಶ್ಚಿಮ ಬಂಗಾಳ, ರಾಜಸ್ಥಾನ, ತೆಲಂಗಾಣ, ಮಹಾರಾಷ್ಟ್ರ, ಪಂಜಾಬ್‌ ಮತ್ತಿತರ ರಾಜ್ಯ ಸರಕಾರಗಳು ದರ ಇಳಿಸಿಲ್ಲ. ಆ ರಾಜ್ಯಗಳ ಜನತೆ ದರ ಇಳಿಕೆ ಪಡೆಯಬೇಡವೇ," ಎಂದು ಬಿಜೆಪಿಯ ಐಟಿ ವಿಭಾಗದ ಉಸ್ತುವಾರಿ ಅಮಿತ್‌ ಮಾಳವೀಯ ಟ್ವೀಟ್‌ ಮಾಡಿದ್ದಾರೆ.
               ''ಬೆಲೆ ಏರಿಕೆ ಬಗ್ಗೆ ಉಪದೇಶ ನೀಡುವ ಪ್ರತಿಪಕ್ಷಗಳು ಕೇಂದ್ರ ಸರಕಾರವು ತೈಲ ದರಗಳ ಮೇಲಿನ ಅಬಕಾರಿ ಸುಂಕ ಇಳಿಸಿದ ನಂತರ ಸ್ಥಳೀಯ ತೆರಿಗೆಯನ್ನು ಇಳಿಸಲು ಮಾತ್ರ ನಾಪತ್ತೆಯಾಗಿವೆ. ಮಾಡಬೇಕಾಗಿರುವ ಕೆಲಸದ ವಿಚಾರಕ್ಕೆ ಬಂದಾಗ ಸದಾ ಪ್ರತಿಪಕ್ಷಗಳು ಕಾಣಿಸಿಕೊಳ್ಳುವುದಿಲ್ಲ," ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಆರೋಪಿಸಿದ್ದಾರೆ.
              "ಸರಕಾರ ಹೃದಯಪೂರ್ವಕವಾಗಿ ದರ ಇಳಿಸಿಲ್ಲ. ಉಪ ಚುನಾವಣೆಗಳ ಫಲಿತಾಂಶದ ನಂತರ ಕಳವಳದಿಂದ ದರ ಇಳಿಕೆ ಮಾಡಿದೆ," ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.

                    "ಅಧಿಕ ತೆರಿಗೆಯೇ ತೈಲ ದರ ಹೆಚ್ಚಳಕ್ಕೆ ಕಾರಣ ಎಂಬ ನಮ್ಮ ಆರೋಪ ಈಗ ಸಾಬೀತಾದಂತಾಗಿದೆ. ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಇಫೆಕ್ಟ್ ಇದಾಗಿದೆ," ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ.
                                   ದರ ಇಳಿಕೆ ನಾಟಕ ಎಂದ ಲಾಲೂ

            ಕೇಂದ್ರ ಸರಕಾರದಿಂದ ತೈಲ ದರ ಇಳಿಕೆ ಕೇವಲ ನಾಟಕವಾಗಿದ್ದು, ಪ್ರಯೋಜನವಾಗದು. ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸ್ವಲ್ಪ ಸುಂಕ ಇಳಿಸಲಾಗಿದೆಯಷ್ಟೇ. ಕನಿಷ್ಠ 50 ರೂ. ಇಳಿಸದರೆ ರಿಲೀಫ್‌ ಸಿಗಬಹುದು ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಹೇಳಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries