ಕಣ್ಣೂರು: ಕಳೆದೆರಡು ದಿನಗಳಿಂದ ಮಾಹೆ ಮಯ್ಯಳಿಯಲ್ಲಿ ಪೆಟ್ರೋಲ್ ಪಂಪ್ ಗಳಲ್ಲಿ ಭಾರೀ ದಟ್ಟಣೆ ಉಂಟಾಗಿದೆ. ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ರಸ್ತೆಗಳಲ್ಲಿ ಹಲವು ಬಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ತಲಶ್ಶೇರಿ ಮತ್ತು ವಡಕರ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಇಂಧನ ತುಂಬಿಸಿಕೊಳ್ಳಲು ಬರುತ್ತಿದ್ದರಿಂದ ಬಿಕ್ಕಟ್ಟು ಉಂಟಾಗಿದೆ.
ಕೇಂದ್ರ ಸರ್ಕಾರ ಪೆಟ್ರೋಲಿಯಂ ದರ ಕಡಿತಗೊಳಿಸಿದ ನಂತರ ಬಿಜೆಪಿ ಆಡಳಿತದ ಪುದುಚೇರಿಯಲ್ಲಿ ವ್ಯಾಟ್ ಕಡಿತದೊಂದಿಗೆ ಮಯ್ಯಳಿಯಲ್ಲಿ ಇಂಧನ ಬೆಲೆಗಳು ಕಡಿಮೆಯಾಗಿದೆ. ಇದರಿಂದಾಗಿ ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಿಂದ ಮಯ್ಯಳಿಗೆ ವಾಹನಗಳ ಹರಿವು ಹೆಚ್ಚುತ್ತಿದೆ. ಕಣ್ಣೂರಿನಿಂದ ಕೋಝಿಕ್ಕೋಡ್‍ಗೆ ಸಂಚರಿಸುವ ಖಾಸಗಿ ಬಸ್‍ಗಳು ಮತ್ತು ಭಾರೀ ವಾಹನಗಳು ಮಾಹೆಯಿಂದ ಇಂಧನ ತುಂಬಿಸಿಕೊಳ್ಳುತ್ತಿವೆ.
ಮಾಹೆಯಲ್ಲಿ ಸದ್ಯ ಪೆಟ್ರೋಲ್ ದರ 92.52 ರೂ., ಡೀಸೆಲ್ ದರ 80.94 ರೂ. ಇದೆ. ಮಾಹೆಗೆ ಸಮೀಪವಿರುವ ತಲಶ್ಶೇರಿಯಲ್ಲಿ ಪೆಟ್ರೋಲ್ ಬೆಲೆ ಇನ್ನೂ 100 ರೂ.ವರೆಗಿದೆ.
ಕೇರಳದಲ್ಲಿ ಬೆಲೆ ಇಳಿಕೆಯಾಗದ ಕಾರಣ ತಲಶ್ಶೇರಿ ಮತ್ತು ವಡಕರದ ಜನರು ಕೇಂದ್ರಾಡಳಿತ ಪ್ರದೇಶವಾದ ಮಾಹೆಯ ಪೆಟ್ರೋಲ್ ಪಂಪ್‍ಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಇದರಿಂದ ಮಯ್ಯಳಿಯ ಪಂಪ್‍ಗಳಲ್ಲಿ ದಟ್ಟಣೆ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ತೆರಿಗೆ ಇಳಿಸಲು ಸಿದ್ಧವಿಲ್ಲದ ಕಾರಣ ಕೇರಳದಲ್ಲಿ ಇಂಧನ ಬೆಲೆ ಯಥಾಸ್ಥಿತಿಯಲ್ಲಿದೆ. ಪುದುಚೇರಿಯ ಹೊರತಾಗಿ ಕರ್ನಾಟಕವೂ ರಾಜ್ಯದ ತೆರಿಗೆಯನ್ನು ಕಡಿಮೆ ಮಾಡಿದೆ.