ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ತೀವ್ರ ಕುಸಿತ ಕಂಡಿದ್ದ ವ್ಯಾಪಾರ ಪ್ರಕ್ರಿಯೆಗೆ ದೀಪಾವಳಿ ಹೊಸ ಚೈತನ್ಯ ನೀಡಿದೆ. ಭಾರತದಲ್ಲಿ ಬೆಳಕಿನ ಹಬ್ಬದ ಸಂಭ್ರಮದಲ್ಲಿ 1.25 ಲಕ್ಷ ಕೋಟಿ ರೂಪಾಯಿಯಷ್ಟು ವ್ಯಾಪಾರ ನಡೆದಿದ್ದು ಹೊಸ ದಾಖಲೆಯಾಗಿದೆ. ಎರಡು ವರ್ಷಗಳ ನಂತರ ಬರೆದ ದಾಖಲೆ ಬಗ್ಗೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ. "ಕಳೆದ ಎರಡು ವರ್ಷಗಳ ನಂತರ, ಈ ವರ್ಷ ದೆಹಲಿ ಸೇರಿದಂತೆ ದೇಶಾದ್ಯಂತ ದೀಪಾವಳಿ ಹಬ್ಬವನ್ನು ಹೊಸ ಉತ್ಸಾಹ ಮತ್ತು ಚೈತನ್ಯದೊಂದಿಗೆ ಆಚರಿಸಲಾಗಿದೆ. ಕಳೆದ ಒಂದು ವಾರದಿಂದ ದೇಶದ ಬಹುಪಾಲು ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಎರಡು ವರ್ಷಗಳಲ್ಲಿ ಸರಳವಾಗಿ ಹಬ್ಬ ಆಚರಿಸಿದ ಸಾರ್ವಜನಿಕರು ಈ ಬಾರಿ ಅದ್ಧೂರಿಯಾಗಿ ದೀಪಾವಳಿ ಆಚರಿಸಲು ಭರ್ಜರಿ ಖರೀದಿ ನಡೆಸಿದ್ದಾರೆ," ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(CAIT) ಹೇಳಿದೆ.
ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲೇ ದೀಪಾವಳಿ ಹಬ್ಬದ ಸಂಭ್ರಮದಲ್ಲಿ 25,000 ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಕಳೆದ 10 ವರ್ಷಗಳಲ್ಲೇ ಅತಿಹೆಚ್ಚು ವ್ಯಾಪಾರವಾಗಿದೆ ಎಂದು ಪ್ರವೀಣ್ ಖಂದೇಲ್ವಾಲ್ ಹೇಳಿದ್ದಾರೆ. ಈ ವರ್ಷ 9,000 ಕೋಟಿ ರೂ.ಗೂ ಅಧಿಕ ಮೊತ್ತದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಖರೀದಿಸಲಾಗಿದೆ. ಅಲ್ಲದೆ, ಈ ದೀಪಾವಳಿಯು ಪ್ಯಾಕೇಜಿಂಗ್ ಸರಕುಗಳಿಗಾಗಿ 15,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.ಚೀನಾ ಸರಕುಗಳ ಬದಲಿಗೆ ಭಾರತೀಯ ಸರಕುಗಳಿಗೆ ಆದ್ಯತೆ: "ಈ ಬಾರಿ ದೇಶಾದ್ಯಂತ ಮಾರುಕಟ್ಟೆಗಳಲ್ಲಿ ಚೀನಾದ ಸರಕುಗಳು ಮಾರಾಟವಾಗಲಿಲ್ಲ. ಗ್ರಾಹಕರು ಭಾರತೀಯ ವಸ್ತುಗಳ ಖರೀದಿಗೆ ವಿಶೇಷ ಒತ್ತು ನೀಡಿದ್ದರು. ಇದರಿಂದಾಗಿ ಚೀನಾ 50,000 ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟವನ್ನು ಅನುಭವಿಸಿದೆ," ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ರಾಷ್ಟ್ರಾಧ್ಯಕ್ಷ ಬಿ.ಸಿ.ಭಾರತಿಯಾ ಹೇಳಿದ್ದಾರೆ. ಸುಮಾರು 7 ಕೋಟಿ ವ್ಯಾಪಾರಿಗಳನ್ನು ಪ್ರತಿನಿಧಿಸುವ ಸಿಎಐಟಿ, ಉತ್ತಮ ವ್ಯಾಪಾರದ ನಿರೀಕ್ಷೆಯನ್ನು ಹೆಚ್ಚಿಸಿದೆ. ವ್ಯಾಪಾರ ಮತ್ತು ಆರ್ಥಿಕತೆ ಕುಸಿತಕ್ಕೆ ಮದ್ದು: "ದೀಪಾವಳಿ ಸಂದರ್ಭದಲ್ಲಿ ದೇಶಾದ್ಯಂತ ನಡೆದಿರುವ ವ್ಯಾಪಾರವು ಕಳೆದ ಎರಡು ವರ್ಷಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಕಂಡು ಬಂದಿದ್ದ ಕುಸಿತವನ್ನು ಮರೆ ಮಾಚಿಸುವಂತಿದೆ. ಅದರ ಜೊತೆಗೆ ಭವಿಷ್ಯದಲ್ಲಿ ಉತ್ತಮ ವ್ಯಾಪಾರ ಮತ್ತು ವಹಿವಾಟಿನ ನಿರೀಕ್ಷೆಯನ್ನು ಹುಟ್ಟು ಹಾಕಿದೆ, "ಎಂದು ಖಂಡೇಲ್ವಾಲ್ ಹೇಳಿದ್ದಾರೆ. ಸಿಎಐಟಿ ಪ್ರಕಾರ, ಈ ವರ್ಷಾಂತ್ಯದ ವೇಳೆಗೆ ಗ್ರಾಹಕರು 3 ಲಕ್ಷ ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಿದ್ದಾರೆ. ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಸಹ ಈ ವರ್ಷ ಚುರುಕಾದ ವ್ಯಾಪಾರವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದೆ. Amazon ಪ್ರಕಾರ, ಅದರ ತಿಂಗಳ ಅವಧಿಯ ಹಬ್ಬದ ಸಮಯದಲ್ಲಿ ಎರಡು ಮತ್ತು ಮೂರನೇ ಸಾಲಿನ ಪಟ್ಟಣಗಳಿಂದ ಶೇ.79ರಷ್ಟು ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ.