ನವದೆಹಲಿ: ಇಂದಿನಿಂದ ಆರಂಭಗೊಂಡ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ತೀವ್ರ ಗದ್ದಲ ಸೃಷ್ಟಿಸಿದ್ದು, ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿದ ಹಿನ್ನೆಲೆಯಲ್ಲಿ ರಾಜ್ಯಸಭೆಯ 12 ಮಂದಿ ವಿರೋಧ ಪಕ್ಷದ ಸಂಸದರನ್ನು ಅಮಾನತು ಮಾಡಲಾಗಿದೆ.
ಅಮಾನತುಗೊಂಡಿರುವ 12 ಮಂದಿ ಸಂಸದರ ಪೈಕಿ ಆರು ಮಂದಿ ಕಾಂಗ್ರೆಸ್, ಟಿಎಂಸಿಯ ತಲಾ ಇಬ್ಬರು ಮತ್ತು ಶಿವಸೇನೆ ಹಾಗೂ ಸಿಪಿಎಂ ಮತ್ತು ಸಿಪಿಐನಿಂದ ತಲಾ ಒಬ್ಬರು ಸೇರಿದ್ದಾರೆಂದು ತಿಳಿದುಬಂದಿದೆ.
ರಾಜ್ಯಸಭೆಯ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರು ಸದಸ್ಯರ ಅಮಾನತು ಘೋಷಿಸಿ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.
ಕಾಂಗ್ರೆಸ್‌ನ ಫೂಲೋ ದೇವಿ ನೇತಮ್, ಛಾಯಾ ವರ್ಮಾ, ರಿಪುನ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್ ಮತ್ತು ಅಖಿಲೇಶ್ ಪ್ರಸಾದ್ ಸಿಂಗ್ ಅಮಾನತುಗೊಂಡಿದ್ದಾರೆ.
ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಮತ್ತು ಅನಿಲ್ ದೇಸಾಯಿ, ಟಿಎಂಸಿಯ ಡೋಲಾ ಸೇನ್ ಮತ್ತು ಶಾಂತಾ ಛೆಟ್ರಿ, ಸಿಪಿಎಂನಿಂದ ಎಲಮರಮ್ ಕರೀಂ ಮತ್ತು ಸಿಪಿಐನಿಂದ ಬಿನೋಯ್ ವಿಶ್ವಂ ಅವರು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಂಡ ವಿರೋಧ ಪಕ್ಷದ ಸಂಸದರಾಗಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಸಂಸತ್ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ನಿಯಮ ದುರುಪಯೋಗ ಹಾಗೂ ಅಶಿಸ್ತಿನಿಂದ ನಡೆದುಕೊಂಡಿರುವ ಕಾರಣ ಸದಸ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಪೆಗಾಸಸ್, ಕೃಷಿ ಕಾಯ್ದೆ ಮಸೂದೆ ಸೇರಿದಂತೆ ವಿವಿಧ ವಿಷಯಗಳನ್ನಿಟ್ಟುಕೊಂಡು ನಿರಂತರವಾಗಿ ಸದನಕ್ಕೆ ಅಡ್ಡಿಪಡಿಸಲಾಗುತ್ತಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.