ತಿರುವನಂತಪುರಂ: ಕೇರಳದ ವಯಾನಾಡ್ ನಲ್ಲಿ ನೋರೋವೈರಾಣು ಪ್ರಕರಣ ದೃಢಪಟ್ಟಿರುವ ಬೆನ್ನಲ್ಲೇ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ವಾಂತಿ ಹಾಗೂ ಅತಿಸಾರ ಉಂಟುಮಾಡುವ, ಸಾಂಕ್ರಾಮಿಕ ವೈರಾಣು ಇದಾಗಿದ್ದು, ಜನತೆ ಈ ಹರಡಬಲ್ಲ ವೈರಾಣುವಿನ ಬಗ್ಗೆ ಎಚ್ಚರದಿಂದ ಇರಬೇಕೆಂದು ಸರ್ಕಾರ ಹೇಳಿದೆ.
ಅಪರೂಪದ ನೋರೋವೈರಸ್ ಸೋಂಕು ವಯಾನಾಡ್ ಜಿಲ್ಲೆಯ ಪೂಕೋಡ್ ನಲ್ಲಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ 13 ವಿದ್ಯಾರ್ಥಿಗಳಲ್ಲಿ 2 ವಾರಗಳ ಹಿಂದೆ ಕಾಣಿಸಿಕೊಂಡಿತ್ತು.
ನೋರೋವೈರಸ್ ಗೆ ಸಂಬಂಧಿಸಿದಂತೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೊಸದಾಗಿ ಹೆಚ್ಚಿನ ಪ್ರಕರಣಗಳು ವರದಿಯಾಗಿಲ್ಲವಾದರೂ, ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಪಶುವೈದ್ಯಕೀಯ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳ ಡೇಟಾ ಬೇಸ್ ನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕ್ಯಾಂಪಸ್ ನಿಂದ ಹೊರಗೆ ಇರುವ ಹಾಸ್ಟೆಲ್ ನಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ಪೈಕಿ ಮೊದಲ ಪ್ರಕರಣ ವರದಿಯಾಗಿದೆ ಎಂದು ಕಾಲೇಜಿನ ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣವೇ ಆರೋಗ್ಯಾಧಿಕಾರಿಗಳು ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದು, ಎನ್ ಐವಿ ಗೆ ಕಳಿಸಿದ್ದಾರೆ. ನೋರೋವೈರಸ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.