ನವದೆಹಲಿ: ಕೋವಿಡ್ ನಂತರ ಸತತ ನಾಲ್ಕನೇ ತಿಂಗಳು ಭಾರತದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದ್ದು, ಅಕ್ಟೋಬರ್ ತಿಂಗಳಲ್ಲಿ 1.30 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ.
ಇದು ಜುಲೈ 2017 ರಲ್ಲಿ ಜಿಎಸ್ ಟಿ ಜಾರಿಗೆ ಬಂದ ನಂತರ ಸಂಗ್ರಹವಾದ ಎರಡನೇ ಅತಿ ಹೆಚ್ಚು ತೆರಿಯಾಗಿದ್ದು, ಇದು ಕೋವಿಡ್ ಸಾಂಕ್ರಾಮಿಕ ಮತ್ತು ಹಬ್ಬದ ಬೇಡಿಕೆಯ ಪರಿಣಾಮದಿಂದ ಆರ್ಥಿಕ ಚೇತರಿಕೆಯನ್ನು ಸೂಚಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
2021ರ ಏಪ್ರಿಲ್‌ನಲ್ಲಿ ಗರಿಷ್ಠ 1.41 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ 1.17 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿತ್ತು.
ಕಳೆದ ತಿಂಗಳು ಮಾರಾಟವಾದ ಸರಕುಗಳು ಮತ್ತು ಸಲ್ಲಿಸಿದ ಸೇವೆಗಳ ಮೇಲಿನ ತೆರಿಗೆ ಸಂಗ್ರಹಗಳು ಅಕ್ಟೋಬರ್ 2020 ಕ್ಕಿಂತ ಶೇ. 24 ರಷ್ಟು ಹೆಚ್ಚಾಗಿದೆ ಮತ್ತು 2019-20 ಕ್ಕಿಂತ ಶೇ. 36 ರಷ್ಟು ಹೆಚ್ಚಾಗಿದೆ.
"ಅಕ್ಟೋಬರ್ 2021 ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,30,127 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದರಲ್ಲಿ ಸಿಜಿಎಸ್‌ಟಿ 23,861 ಕೋಟಿ ರೂಪಾಯಿ, ಎಸ್‌ಜಿಎಸ್‌ಟಿ 30,421 ಕೋಟಿ ರೂಪಾಯಿ, ಐಜಿಎಸ್‌ಟಿ 67,361 ಕೋಟಿ ರೂಪಾಯಿ (32,998 ಕೋಟಿ ರೂಪಾಯಿಗಳನ್ನು ಒಳಗೊಂಡಂತೆ) ಮತ್ತು ಸರಕು ಆಮದು 8,484 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 699 ಕೋಟಿ ಸೇರಿದಂತೆ)" ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಸೆಮಿ ಕಂಡಕ್ಟರ್‌ಗಳ ಪೂರೈಕೆಯಲ್ಲಿನ ಅಡಚಣೆಯಿಂದಾಗಿ ಕಾರುಗಳು ಮತ್ತು ಇತರ ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಬೀರದಿದ್ದರೆ ಆದಾಯವು ಇನ್ನೂ ಹೆಚ್ಚಿರುತ್ತಿತ್ತು ಎಂದು ಸಚಿವಾಲಯವು ಹೇಳಿದೆ.