ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥದಲ್ಲಿ ರೂ.130 ಕೋಟಿ ರೂಪಾಯಿಗಳ ಪುನರಾಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಉದ್ಘಾಟಿಸಿದರು.
ಈ ಯೋಜನೆಗಳಲ್ಲಿ ಸರಸ್ವತಿ ರಿಟೈನಿಂಗ್ ವಾಲ್ ಆಸ್ಥಾಪಥ್ ಮತ್ತು ಘಾಟ್‌ಗಳು, ಮಂದಾಕಿನಿ ರಿಟೈನಿಂಗ್ ವಾಲ್ ಆಸ್ಥಾಪತ್, ಅರ್ಚಕರ ಮನೆ, ಮಂದಾಕಿನಿ ನದಿಯ ಗರುಡ್ಚಟ್ಟಿ ಸೇತುವೆ ಸೇರಿದಂತೆ ಮೂಲಸೌಕರ್ಯ ಯೋಜನೆಗಳು ಇವೆ.
ಯೋಜನೆಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಮೋದಿಯವರು, ಇಲ್ಲಿ ನಡೆದ ಆದಿ ಶಂಕರಾಚಾರ್ಯ ಸಮಾಧಿ ಉದ್ಘಾಟನೆಗೆ ನೀವೆಲ್ಲರೂ ಸಾಕ್ಷಿಯಾಗಿದ್ದೀರಿ. ಅವರ ಭಕ್ತರು ಇಲ್ಲಿ ಉತ್ಸಾಹದಿಂದ ಇದ್ದಾರೆ. ದೇಶದ ಎಲ್ಲಾ ಮಠಗಳು ಮತ್ತು ‘ಜ್ಯೋತಿರ್ಲಿಂಗಗಳು’ ಇಂದು ನಮ್ಮೊಂದಿಗೆ ಸಂಪರ್ಕ ಹೊಂದಿವೆ ಎಂದು ಹೇಳಿದ್ದಾರೆ.
2013 ರ ವಿನಾಶದ ನಂತರ, ಜನರು ಕೇದಾರನಾಥವನ್ನು ಪುನರಾಭಿವೃದ್ಧಿ ಮಾಡಬಹುದೇ ಎಂದು ಜನರು ಯೋಚಿಸುತ್ತಿದ್ದರು. ಆದರೆ ಕೇದಾರನಾಥ ಮತ್ತೆ ಅಭಿವೃದ್ಧಿಯಾಗಲಿದೆ ಎಂದು ನನ್ನೊಳಗಿನ ಧ್ವನಿ ಯಾವಾಗಲೂ ಹೇಳುತ್ತಿತ್ತು. ನಿನ್ನೆ ಯೋಧರ ಜತೆ ದೀಪಾವಳಿ ಆಚರಿಸಿ ಬಂದಿರುವೆ. 130 ಕೋಟಿ ಜನರ ಆಶೀರ್ವಾದದಿಂದ ದೀಪಾವಳಿ ಆಚರಣೆ ಮಾಡಲಾಗಿದೆ. ಬಲಿಪಾಡ್ಯಮಿಯಂದು ಕೇದಾರನಾಥದಲ್ಲಿ ಪೂಜೆ ಮಾಡಿರುವೆ. ಕೆಲ ದೈವಿಕ ಅನುಭವಗಳನ್ನು ವ್ಯಕ್ತಪಡಿಸಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ದೆಹಲಿಯಿಂದ ಕೇದಾರನಾಥದಲ್ಲಿನ ಪುನರಾಭಿವೃದ್ಧಿ ಕಾರ್ಯಗಳನ್ನು ನಿಯಮಿತವಾಗಿ ಪರಿಶೀಲಿಸಿದ್ದೇನೆ. ಇಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಡ್ರೋನ್ ದೃಶ್ಯಾವಳಿಗಳ ಮೂಲಕ ಪರಿಶೀಲಿಸಿದ್ದೇನೆ. ಈ ಕೆಲಸಗಳಿಗೆ ಮಾರ್ಗದರ್ಶನ ನೀಡಿದ ಎಲ್ಲಾ ‘ರಾವಲ್’ಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.
ಶಿವನ ಮತ್ತೊಂದು ಅವತಾರವೇ ಶಂಕರಾಚಾರ್ಯರು. ಕೇದಾರನಾಥದಲ್ಲಿ ಪ್ರಕೃತಿ ವಿಕೋಪದ ದೃಶ್ಯ ನೋಡಿದ್ದೇವೆ. ಪ್ರಕೃತಿ ವಿಕೋಪದ ಬಳಿಕ ಮರುನಿರ್ಮಾಣ ಮಾಡಿದ್ದೇವೆ. ಕೇದಾರನಾಥದಲ್ಲಿ ಮರು ನಿರ್ಮಿಸಿದ್ದು ಈಶ್ವರನ ಕೃಪೆ.
ಆಧ್ಯಾತ್ಮ ಮತ್ತು ಧರ್ಮವು ಕೇವಲ ಸ್ಟೀರಿಯೊಟೈಪ್‌ಗಳೊಂದಿಗೆ ಸಂಬಂಧ ಹೊಂದಿದೆಯೆಂದು ನಂಬಲಾದ ಕಾಲವೊಂದಿತ್ತು. ಆದರೆ, ಭಾರತೀಯ ತತ್ವಶಾಸ್ತ್ರವು ಮಾನವ ಕಲ್ಯಾಣದ ಬಗ್ಗೆ ಮಾತನಾಡುತ್ತದೆ, ಜೀವನವನ್ನು ಸಮಗ್ರ ರೀತಿಯಲ್ಲಿ ನೋಡುತ್ತದೆ. ಆದಿ ಶಂಕರಾಚಾರ್ಯರು ಈ ಸತ್ಯದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಲು ಕೆಲಸ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ಬಹುದೊಡ್ಡ ರಾಮನ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಅಲ್ಲಿ ದೀಪೋತ್ಸವವನ್ನೂ ನಡೆಸಲಾಗಿತ್ತು. ವಾರಣಾಸಿಯಲ್ಲಿನ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಕೂಡ ತ್ವರಿತಗತಿಯಲ್ಲಿ ಸಾಗುತ್ತಿದೆ. ದೇಶದ ಗುರಿ ಬಹುದೊಡ್ಡದಾಗಿದ್ದು, ಈ ಗುರಿ ಸಾಧನೆಗೆ ಸಮಯವನ್ನೂ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರಾಖಂಡ್‌ಗೆ ಚಾರ್ ಧಾಮ್‌ಗಳಿಗೆ ರೋಪ್ ವೇ ಮಾಡಲಾಗುವುದು. ರೋಪ್‌ವೇಗೆ ರಸ್ತೆ ಸಂಪರ್ಕವನ್ನು ಒಳಗೊಂಡಂತೆ ಮೂಲಸೌಕರ್ಯ ಕಾರ್ಯಗಳನ್ನು ಯೋಜಿಸಲಾಗಿದೆ. ಈ ದಶಕ ಉತ್ತರಾಖಂಡ ರಾಜ್ಯಕ್ಕೆ ಮೀಸಲು. ಮುಂದಿನ 10 ವರ್ಷಗಳಲ್ಲಿ ರಾಜ್ಯ ಹೆಚ್ಚು ಅಭಿವೃದ್ಧಿ ಆಗಲಿದೆ. ಕಳೆದ 100 ವರ್ಷಗಳಲ್ಲಿ ಹೆಚ್ಚಿನ ಪ್ರವಾಸಿಗರು ಬರಲಿದ್ದಾರೆ ಎಂದು ಹೇಳಿದ್ದಾರೆ.